Advertisement

ಮಲೆನಾಡಿನ ವೈಭವ ಮರೆ: ಡಿಸಿ

04:10 PM Jun 06, 2019 | Naveen |

ಶಿವಮೊಗ್ಗ: ಸಹ್ಯಾದ್ರಿಯ ಹೆಬ್ಟಾಗಿಲೆನಿಸಿದ್ದ ಹಾಗೂ ಜೀವ ವೈವಿಧ್ಯತೆಯ ತಾಣಕ್ಕೆ ಹೆಸರಾಗಿದ್ದ ಶಿವಮೊಗ್ಗ ಜಿಲ್ಲೆ ಕೆಲವೇ ವರ್ಷಗಳಿಂದೀಚೆಗೆ ತನ್ನ ಮಲೆನಾಡಿನ ವೈಭವವನ್ನು ಕಳೆದುಕೊಂಡು ಪರಿಸರದ ಅಸಮತೋಲನಕ್ಕೆ ಕಾರಣವಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ಹೇಳಿದರು.

Advertisement

ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯು ಜಿಲ್ಲಾಡಳಿತ, ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯ ಪರಿಸರದ ಮೇಲೆ ಮಾಡುತ್ತಿರುವ ಅವ್ಯಾಹತ ದಾಳಿಯಿಂದಾಗಿ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ವಾಡಿಕೆಯಂತೆ ಕಾಲಕಾಲಕ್ಕೆ ಆಗುತ್ತಿದ್ದ ಮಳೆ ಕಾಣೆಯಾಗಿದೆ. ಇದಕ್ಕೆ ನಮ್ಮಲ್ಲಿ ಪರಿಸರದ ಮೇಲಿನ ಅನಾಸಕ್ತಿಯೇ ಕಾರಣವಾಗಿದೆ ಎಂದರು.

ನಮ್ಮ ಸಂತೋಷಕ್ಕಾಗಿ ಬಳಸುವ ಪ್ಲಾಸ್ಟಿಕ್‌ ಇಂದು ದೈತ್ಯ ಭೂತವಾಗಿ ನಮ್ಮೆದುರು ನಿಂತಿದೆ. ಅದರ ಸೂಕ್ತ ವಿಲೇವಾರಿಗೂ ನಾವು ಗಮನ ಹರಿಸುತ್ತಿಲ್ಲ. ಇಚ್ಛಾಶಕ್ತಿಯ ಕೊರತೆಯೂ ಅದಕ್ಕೆ ಕಾರಣವಿರಬಹುದು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ, ಅದರ ಸಮತೋಲನ ಕಾಯ್ದುಕೊಳ್ಳಲು ಎಲ್ಲರೂ ಸಂಕಲ್ಪ ಮಾಡಬೇಕು. ಕೇವಲ ಗಿಡ ನೆಟ್ಟು ಪರಿಸರ ದಿನ ಆಚರಿಸುವುದಕ್ಕಿಂತ ನೆಟ್ಟಿರುವ ಗಿಡಗಳನ್ನು ಜತನದಿಂದ ಕಾಯ್ದು ಪೋಷಿಸುವ ಅಗತ್ಯವಿದೆ. ಪ್ರಸ್ತುತ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ ವಿಶೇಷವಾಗಿರುವಂತೆ ಆಚರಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲಾ-ಕಾಲೇಜುಗಳ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಒಂದೆಡೆ ಕಲೆತು ನಂತರ ಪಾಲಿಕೆ ವ್ಯಾಪ್ತಿಯ 35 ವಾರ್ಡುಗಳಲ್ಲಿ 35 ತಂಡಗಳಾಗಿ ಸಂಚರಿಸಿ, ಅಲ್ಲಿನ ಕಸ ಮತ್ತು ಪ್ಲಾಸ್ಟಿಕ್‌ನ್ನೂ ಆಯ್ದು ತರಲಾಗುವುದು. ಆ ಮೂಲಕ ನಗರದ ನಾಗರಿಕರಿಗೆ ಪರಿಸರ ಸ್ವಚ್ಛತೆಯ ಅರಿವು ಮೂಡಿಸಲಾಗುವುದು. ಅಲ್ಲದೆ ಕಸದ ವ್ಯವಸ್ಥಿತ ವಿಲೇವಾರಿ ಮಾಡುವಂತೆ ತಿಳಿಸಲಾಗುವುದು. ಪರಿಸರ ಸಂರಕ್ಷಣೆ ಕೇವಲ ಇಲಾಖೆಗಳ ಅಧಿಕಾರಿಗಳು, ಪಾಲಿಕೆಯ ಜವಾಬ್ದಾರಿಯಲ್ಲ. ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂತೋನಿ ಮರಿಯಪ್ಪ, ಮಹಾನಗರ ಪಾಲಿಕೆ ಉಪಮೇಯರ್‌ ಚನ್ನಬಸಪ್ಪ, ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಜೆಸಿಂತಾ ಡಿಸೋಜ ಸೇರಿದಂತೆ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next