Advertisement

ಸಚಿವಗಿರಿಗಾಗಿ ಓಟ; ಅದೃಷ್ಟದಾಟ!

10:59 AM Jul 28, 2019 | Naveen |

ಶಿವಮೊಗ್ಗ: ಮತ್ತೂಮ್ಮೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಪಕ್ಷದ ಶಕ್ತಿ ಕೇಂದ್ರವಾದ ಶಿವಮೊಗ್ಗದಲ್ಲಿ ಸಚಿವ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಬಿಸಿ ಬಿಸಿ ಚರ್ಚೆ ಆರಂಭಗೊಂಡಿದೆ. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಆರರಲ್ಲಿ ನಾಲ್ವರು ಈಗಾಗಲೇ ಸಚಿವ ಸ್ಥಾನಕ್ಕೇರಿ ಅನುಭವಿಗಳಾಗಿದ್ದಾರೆ. ಇಬ್ಬರು ಎಂಎಲ್ಸಿಗಳಿದ್ದು ಇಬ್ಬರೂ ಬಿ.ಎಸ್‌. ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಯಾರಿಗೆ ಸಚಿವ ಸ್ಥಾನ ದಕ್ಕಲಿದೆ ಎಂಬ ಕುತೂಹಲ ಮೂಡಿದೆ.

Advertisement

ಗೆದ್ದವರೆಲ್ಲ ಹಿರಿಯರೆ: ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರ ಮತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯ ಹಲವು ಶಾಸಕರಿಗೆ ಸಚಿವರಾಗುವ ಸುಯೋಗ ಬಂದಿತ್ತು. ಈಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ ನಾಯ್ಕ ಮತ್ತು ಪಕ್ಷದ ಜಿಲ್ಲಾಧ್ಯಕ್ಷರೂ ಆದ ಎಸ್‌. ರುದ್ರೇಗೌಡ ಅವರನ್ನು ಹೊರತುಪಡಿಸಿ ಪಕ್ಷದ ಉಳಿದೆಲ್ಲಾ ಶಾಸಕರು ಸಚಿವರಾಗುವ ಹಿರಿತನ ಹೊಂದಿದ್ದಾರೆ. ಈ ಆಧಾರದಲ್ಲಿ ಈಶ್ವರಪ್ಪ ಅವರಲ್ಲದೆ ಈಗಾಗಲೇ ಸಚಿವರಾದ ಅನುಭವ ಹೊಂದಿರುವ ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಆಯನೂರು ಮಂಜುನಾಥ್‌ ಸಹ ಅರ್ಹರಾಗಿದ್ದಾರೆ.

ಯಾರಿಗೆ ಅದೃಷ್ಟ: ಬಿಜೆಪಿಗೆ ಶಿವಮೊಗ್ಗ ಜಿಲ್ಲಾ ಘಟಕ ಪ್ರಮುಖವಾದರೂ ರಾಜ್ಯದೆಲ್ಲೆಡೆಯ 105 ಶಾಸಕರು ಇದ್ದಾರೆ. ಮೈತ್ರಿ ಸರಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಅವಕಾಶ ಮಾಡಿಕೊಟ್ಟ ಪಕ್ಷೇತರರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಹೊರಬಂದ ಅತೃಪ್ತರೂ ಮಂತ್ರಿ ರೇಸ್‌ನಲ್ಲಿದ್ದಾರೆ. ಈಶ್ವರಪ್ಪ ಅವರಷ್ಟೇ ಹಿರಿತನ, ಸೇವಾ ಅನುಭವ ಮತ್ತು ಪ್ರಭಾವ ಹೊಂದಿದ 50ಕ್ಕೂ ಅಧಿಕ ಶಾಸಕರು ಪಕ್ಷದೊಳಗಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿರುವ ಶಾಸಕರಿಗೆ ಹಿರಿತನವಿದ್ದರೂ ಯಾರಿಗೆ ಅದೃಷ್ಟ ಒಲಿದುಬರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಪಕ್ಷದ ಕೆಲ ಮುಖಂಡರು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next