Advertisement

ವೃಕ್ಷ ಲಕ್ಷ ಆಂದೋಲನದ ಹೋರಾಟಕ್ಕೆ ಸಿಕ್ತು ಫಲ

01:08 PM Oct 16, 2019 | Naveen |

ಶಿವಮೊಗ್ಗ: ಸಾಗರ ಸಮೀಪದ ಮಂಚಾಲೆ ಬೊಮ್ಮತ್ತಿ, ನಾಡಕಲಸಿ, ನಾರಗೋಡ, ಬಿಳಿಸಿರಿ ಗ್ರಾಮಗಳ ವ್ಯಾಪ್ತಿಯ 326 ಎಕರೆ ಪ್ರದೇಶವನ್ನು ಸಾಗರ ಅರಣ್ಯ ಇಲಾಖೆ ದೇವರ ಕಾಡು ಎಂದು ಘೋಷಣೆ ಮಾಡಿದೆ.

Advertisement

ಅಲ್ಲಿ ಟ್ರೆಂಚ್‌ ನಿರ್ಮಾಣ, ರಕ್ಷಣಾ ಕವಚ ತೊಡಿಸಲಾಗಿದೆ. ಇದರಿಂದ ಸುತ್ತಲಿನ 5 ಹಳ್ಳಿಗಳ 6 ಕೆರೆಗಳು ಜಲ ಸಮೃದ್ಧಿ ಕಾಣಲಿವೆ. ಅರೆಮಲೆನಾಡು ತ್ಯಾಗರ್ತಿಗೆ ಹೊಂದಿಕೊಂಡಿರುವ ಬೊಮ್ಮತ್ತಿ ಮಲೆನಾಡಾಗೇ ಉಳಿಯಲಿದೆ ಎಂದು ವೃಕ್ಷಲಕ್ಷ ಆಂದೋಲನ ಹರ್ಷ ವ್ಯಕ್ತಪಡಿಸಿದೆ.

ಕಳೆದ ಲೋಕಸಭಾ ಚುನಾವಣೆಯ ಭರಾಟೆಯ ಮಧ್ಯೆ ಸಾಗರ-ಹೊಸನಗರ- ಸೊರಬ ಭಾಗಗಳಲ್ಲಿ 10,000 ಎಕರೆ ಕಾನು ಅರಣ್ಯ ನಾಶವಾಗುತ್ತಿದೆ ಎಂಬ ಗಂಭೀರ ಪ್ರಕರಣವನ್ನು ವೃಕ್ಷಲಕ್ಷ ಆಂದೋಲನ ಬಯಲಿಗೆ ತಂದಿತ್ತು. ಎಲ್ಲರ ಗಮನ ಚುನಾವಣೆ ಮೇಲೆ ಇರುವಾಗ ಮಲೆನಾಡಿನ ಗ್ರಾಮ ಸಾಮೂಹಿಕ ಭೂಮಿ-ಕಾನು ಅರಣ್ಯಗಳನ್ನು ಬೇಕಾಬಿಟ್ಟಿ ನಾಶ ಮಾಡುವ ಕೃತ್ಯ, ಭೂಕಬಳಿಕೆ ಆಗುತ್ತಿದೆ ಎಂದು ಮಾರ್ಚ್‌ 2019 ರಲ್ಲಿ ವೃಕ್ಷಲಕ್ಷ ಕಾರ್ಯಕರ್ತರು ಸಾಗರ- ಶಿವಮೊಗ್ಗ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಏಪ್ರಿಲ್‌ನಲ್ಲಿ ರಾಜ್ಯದ ಅರಣ್ಯ ಮುಖ್ಯಸ್ಥರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಭಾರತ ಸರ್ಕಾರದ ಅರಣ್ಯ ಮಂತ್ರಾಲಯಕ್ಕೂ ಅಹವಾಲು ಸಲ್ಲಿಸಿದ್ದರು.

ಹೋರಾಟದ ಆರಂಭ: ಸಾಗರ ಸಮೀಪದ ಮಂಚಾಲೆ ಬೊಮ್ಮತ್ತಿ, ನಾಡಕಲಸಿ, ನಾರಗೋಡ, ಬಿಳಿಸಿರಿ ಗ್ರಾಮಗಳ ಯುವಕರು ಬೊಮ್ಮತ್ತಿ ಸುತ್ತ ನಡೆಯುವ ಭೂಕಬಳಿಕೆ ಬಗ್ಗೆ ವೃಕ್ಷಲಕ್ಷ ಆಂದೋಲನದ ಗಮನ ಸೆಳೆದಿದ್ದರು.

Advertisement

ಮೇ- ಜೂನ್‌ನಲ್ಲಿ 2 ತಿಂಗಳ ಕಾಲ ಕಾರ್ಯಕರ್ತರು ಸರ್ಕಾರದ ಮೇಲೆ ಒತ್ತಡ, ಅರಣ್ಯ ಅಧಿಕಾರಿಗಳ ಜೊತೆ ಸ್ಥಳ ಸಮೀಕ್ಷೆ, ಜಾಗೃತಿ ನಡೆಸಿದ್ದರು.

ಜೀವ ವೈವಿಧ್ಯ ದಾಖಲಾತಿ: ಕಳೆದ ಜುಲೈ ತಿಂಗಳಲ್ಲಿ ಬೊಮ್ಮತ್ತಿಯಲ್ಲಿ ಜೀವ ವೈವಿಧ್ಯ ದಾಖಲಾತಿ ಶಿಬಿರ, ವೃಕ್ಷ ಜಾಗೃತಿ ಜಾಥಾ ಎಂಬ ವಿಶೇಷ ಕಾರ್ಯಕ್ರಮವನ್ನು ವೃಕ್ಷಲಕ್ಷ ಆಂದೋಲನ ರೂಪಿಸಿತು. ರಾಜ್ಯ ಜೀವ ವೈವಿಧ್ಯ ಮಂಡಳಿ, ಅರಣ್ಯ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ಅರಣ್ಯ ಇಲಾಖೆ, ಜಿಪಂ, ಸಾಮಾಜಿಕ ಅರಣ್ಯ, ಪರಿಸರ ವಿಜ್ಞಾನಿಗಳು ಸೇರಿ ಕಾನು ಅರಣ್ಯ ನಾಶವಾಗುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಡಾ| ಟಿ.ವಿ. ರಾಮಚಂದ್ರ, ಡಾ| ಕುಶಾಲಪ್ಪ, ಡಾ| ರಾಮಕೃಷ್ಣ, ಡಾ| ಜಡೆಗೌಡ, ಪ್ರೊ| ಬಿ.ಎಂ. ಕುಮಾರಸ್ವಾಮಿ, ಅನಂತರಾಂ, ಆನೆಗೊಳಿ ಸುಬ್ಬರಾವ್‌, ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಇವರೆಲ್ಲ ಜೀವ ವೈವಿಧ್ಯ ಕಾನು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ನೂರಾರು ಬಳ್ಳಿ, ಬೇರು, ಔಷಧ ಸಸ್ಯ, ಹಣ್ಣು ಬಿಡುವ, ವೃಕ್ಷಗಳು, ಚಾಪೆಹುಲ್ಲು, ಮೇವಿನ ವೃಕ್ಷ, ನಾಟಿನಮರ, ಪವಿತ್ರ ವೃಕ್ಷ, ಜೇನುಮರ, ತಂಬಳಿಗಿಡ, ಗಡ್ಡೆಗೆಣಸುಗಳನ್ನು ಗುರುತಿಸಿದರು. ಈ  ಅರಣ್ಯದ ಪಾರಿಸರಿಕ ಸೇವೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ್ದು ಎಂದು ಅಂದಾಜು ಮಾಡಿದರು.

ದೇವರಕಾಡು ಯೋಜನೆ ಜಾರಿ: ಇದೇ ಹೊತ್ತಿಗೆ ರಾಜ್ಯ ಅರಣ್ಯ ಇಲಾಖೆಯ ಯೋಜನೆ, ಔಷಧಿ ಸಸ್ಯ ವಿಭಾಗದ ಮುಖ್ಯ ಅಧಿಕಾರಿಗಳು ವಿಶೇಷ ದೇವರ ಕಾಡು ನಿರ್ಮಾಣ, ವಿನಾಶದ ಅಂಚಿನ ಔಷಧೀಯ ಸಸ್ಯ ಸಂರಕ್ಷಣಾ ಯೋಜನೆಯನ್ನೇ ಬೊಮ್ಮತ್ತಿ-ನಾರಗೋಡ ಕಾನು ಪ್ರದೇಶಕ್ಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next