Advertisement
ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಶರಾವತಿ ಉಳಿಸಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಅಷ್ಟೇ ಅಲ್ಲದೆ ಬೇರೆ ಯಾವುದೇ ಯೋಜನೆಗಳಿಗೆ ಶರಾವತಿ ದುರ್ಬಳಕೆ ಸಲ್ಲದು. ಶರಾವತಿ ಕಣಿವೆಯ ಸುತ್ತಮುತ್ತ ಇರುವ ಅನೇಕ ಗ್ರಾಮಗಳಿಗೆ ಈಗಲೂ ಕುಡಿಯುವ ನೀರಿಲ್ಲ. ನಮ್ಮ ಸರಕಾರಗಳು ಅವರಿಗೆ ಅನುಕೂಲ ಮಾಡಿಕೊಡುವುದು ಬಿಟ್ಟು ಕೇವಲ ಬೆಂಗಳೂರಿನ ಬಗ್ಗೆ ಯೋಚನೆ ಮಾಡುತ್ತಿವೆ. ಸರಕಾರ ಡಿಪಿಆರ್ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದರು.
Related Articles
Advertisement
ಪ್ರಾಧ್ಯಾಪಕ ಕೆ.ಪಿ. ಶ್ರೀಪತಿ ಮಾತನಾಡಿ, ಶರಾವತಿ ನದಿ ಬೆಂಗಳೂರಿಗೆ 400 ಕಿಮೀ ದೂರ ಇದೆ. ಇಲ್ಲಿಂದ ನೀರನ್ನು ಬೆಂಗಳೂರಿಗೆ ನೀರು ತಲುಪಿಸಲು ಕನಿಷ್ಠ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಕು. ಈ ವಿದ್ಯುತ್ ಅನ್ನು ಬೇರೆ ಮೂಲಗಳಿಂದ ಪಡೆಯಬೇಕು. ಈ ವಿದ್ಯುತ್ ಎಲ್ಲಿಂದ ಬರುತ್ತೆ ಎಂದು ಯಾರೂ ಹೇಳುತ್ತಿಲ್ಲ. 400 ಕಿ.ಮೀ ಮಾರ್ಗದಲ್ಲಿ ಕನಿಷ್ಠ 3 ಮೀಟರ್ ಗಾತ್ರದ ಪೈಪ್ ಹಾಕಲು ಕನಿಷ್ಠ 2 ಸಾವಿರ ಹೆಕ್ಟೇರ್ ಭೂಮಿ ಬೇಕು. ಇದರಲ್ಲಿ ಶೇ.30ರಷ್ಟು ಭೂಮಿ ಮಲೆನಾಡಿನಲ್ಲೇ ಬರುತ್ತೆ. ಇದರಿಂದ ಕೃಷಿ ಭೂಮಿ, ಅರಣ್ಯ ನಾಶವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಏನು ಕೊಡಲು ಸಾಧ್ಯವಿದೆ. ಬೆಂಗಳೂರಿಗರು ಈ ನೀರನ್ನು ಹೇಗೆ ಬಳಸುತ್ತಿದ್ದಾರೆ ಎಂದು ಪ್ರಶ್ನಿಸುವ ಹಕ್ಕು ನಮಗಿದೆ. ಕಾರು ತೊಳೆಯಲು ಬಳಸುತ್ತಾರಾ? ರಸ್ತೆ ತೊಳೆಯಲು ಬಳಸುತ್ತಾರಾ? ವೃಷಭಾವತಿಗೆ ಸೇರಿಸುತ್ತಾರಾ ಎಂಬುದನ್ನು ನಾವು ಪ್ರಶ್ನಿಸಬೇಕಿದೆ. ಬೆಂಗಳೂರಿಗೆ 18 ಟಿಎಂಸಿ ನೀರಿನ ಅಗತ್ಯವಿದೆ. ವಾರ್ಷಿಕ 16 ಟಿಎಂಸಿಯಷ್ಟು ನೀರು ಮಳೆಯಿಂದಲೇ ಸಿಗುತ್ತದೆ. ತಲೆ ಮೇಲೆ ಇರುವ ನೀರನ್ನು ಹಿಡಿದಿಡುವ ಬದಲು ಶರಾವತಿಗೆ ಕನ್ನ ಹಾಕಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳಿಸುತ್ತೇನೆ. ಇದರ ವಾಸ್ತವತೆಯನ್ನು ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು. ಕಡಿದಾಳು ಶಾಮಣ್ಣ, ಎಚ್.ಆರ್. ಬಸವರಾಜಪ್ಪ ಸೇರಿದಂತೆ ಅನೇಕ ಮುಖಂಡರು, ಸಂಘ-ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.