ಶಿವಮೊಗ್ಗ/ತೀರ್ಥಹಳ್ಳಿ: ಶಾಲಾ ಸಂಪರ್ಕ ಸೇತು ಯೋಜನೆ ಕುರಿತು, ಮುಖ್ಯಮಂತ್ರಿ ಕುಮಾರಸ್ವಾಮಿ ವಿದ್ಯಾರ್ಥಿಗಳು, ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ, ತೀರ್ಥಹಳ್ಳಿಯ ವಿದ್ಯಾರ್ಥಿನಿಯೊಬ್ಬಳು, ತಮ್ಮ ಶಾಲೆಗೆ ಬಂದು ವಾಸ್ತವ್ಯ ಮಾಡುವಂತೆ ಸಿಎಂಗೆ ಆಹ್ವಾನ ನೀಡಿದ್ದಾಳೆ.
ವಿಡಿಯೋ ಕಾನ್ಫರೆನ್ಸ್‌ನಲ್ಲಿ, ತೀರ್ಥಹಳ್ಳಿಯ ನಾಲ್ವರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಹೊಸೂರು ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆಶ್ವೀಜಾ, ತಮ್ಮ ಶಾಲೆಗೆ ಬಂದು ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಮನವಿ ಮಾಡಿದ್ದಾಳೆ.
ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಗುಡ್ಡೇಕೇರಿಯ ಮಾದರಿ ಶಾಲೆಯಲ್ಲಿ ವಾಸ್ತವ್ಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಮಾದರಿ ಶಾಲೆಗೆ ಬನ್ನಿ: ಹೊಸೂರು ಗುಡ್ಡೇಕೇರಿಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಉಳಿದ ಶಾಲೆಗೆ ಮಾದರಿಯಾಗಿದೆ. ಇಲ್ಲಿ ಡಿಜಿಟಲ್ ಕ್ಲಾಸ್ ರೂಂ, ಉತ್ತಮ ಲೈಬ್ರರಿ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಹೈಟೆಕ್ ವ್ಯವಸ್ಥೆ ಇದೆ. ಈ ಶಾಲೆಯಂತೆಯೇ ಇತರೆ ಶಾಲೆಗಳನ್ನು ರೂಪಿಸಬೇಕಿದೆ. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುಡ್ಡೇಕರಿ ಪ್ರೌಢಶಾಲೆಯಲ್ಲಿ ವಾಸ್ತವ್ಯ ಮಾಡಬೇಕು ಎಂದು ಆಶ್ವೀಜಾ ಮನವಿ ಮಾಡಿದ್ದಾಳೆ. ಆಶ್ವೀಜಾಳ ಜೊತೆಗೆ ಸಹನಾ ಭಟ್, ಮನುಶ್ರೀ, ಹರ್ಷಿತಾ ಕುಂದಾದ್ರಿ, ಕಳೆದ ವರ್ಷ ಕಾಲು ಸಂಕದಿಂದ ಜಾರಿಬಿದ್ದು ಮೃತಳಾದ ವಿದ್ಯಾರ್ಥಿನಿ ಆಶಿಕಾಳ ತಾಯಿ ಅನಿತಾ, ಚಿಕ್ಕಪ್ಪ ರಮೇಶ್, ತಹಶೀಲ್ದಾರ್ ಆನಂದಪ್ಪ ನಾಯ್ಕ ಸೇರಿದಂತೆ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.
ಯಾಕೆ ವಿಡಿಯೋ ಕಾನ್ಫರೆನ್ಸ್ ? ಕಳೆದ ವರ್ಷ ಮಳೆಗಾಲದಲ್ಲಿ, ಮುರಿದಹೋಗಿದ್ದ ಕಾಲು ಸಂಕದಿಂದ ಜಾರಿಬಿದ್ದು, ಆಶಿಕಾ ಎಂಬ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು. ಈ ಘಟನೆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೊಳಿಸುವಂತೆ ಸೂಚಿಸಿದ್ದರು. ಅದರ ಅನುಷ್ಠಾನ ಕುರಿತು ವಿದ್ಯಾರ್ಥಿಗಳು, ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಆಯೋಜಿಸಲಾಗಿತ್ತು. ತೀರ್ಥಹಳ್ಳಿಯ ತಾಲೂಕು ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ವ್ಯವಸ್ಥೆ ಮಾಡಲಾಗಿತ್ತು.