Advertisement

ಭಾರತೀಯ ಸೇನೆಗೆ ಮಲೆನಾಡಿನ 26 ಯುವಕರ ಆಯ್ಕೆ

12:20 PM Jun 14, 2019 | Naveen |

ಶಿವಮೊಗ್ಗ: ಸಾಗರ ತಾಲೂಕು ಆನಂದಪುರ ಮುರುಘಾಮಠದ ಆವರಣದಲ್ಲಿ ಸೈನಿಕ ತರಬೇತಿ ಪಡೆದ ಮಲೆನಾಡಿನ 26 ಕೆಚ್ಚೆದೆಯ ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.

Advertisement

ಸೈನ್ಯಕ್ಕೆ ಸೇರಲೆಬೇಕೆಂಬ ಉತ್ಕಟ ಬಯಕೆಯೊಂದಿಗೆ ಮಲ್ನಾಡ್‌ ಸೋಲ್ಜರ್‌ ಅಕಾಡೆಮಿಯಲ್ಲಿ 15 ದಿನಗಳ ಕಾಲ ಕಠಿಣ ತಾಲೀಮು ನಡೆಸಿದ 65 ಯುವಕರಲ್ಲಿ 26 ಯುವಕರು ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ. ಆ ಮೂಲಕ ಮಾಜಿ ಯೋಧರ ಕಠಿಣ ಪರಿಶ್ರಮ, ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರಕ್ಕೆ ಫಲ ಸಿಕ್ಕಂತಾಗಿದೆ. ಕೆಳ ಮಧ್ಯಮ ವರ್ಗ ಮತ್ತು ಬಡ ಕುಟುಂಬದಿಂದ ಬಂದ ಆ ಯುವಕರು ದೇಶ ಸೇವೆ ಮೂಲಕ ತಮ್ಮ ಹಾಗೂ ಕುಟುಂಬದ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಬಯಕೆ ಹೊಂದಿದ್ದರು. ಆ ಹುಡುಗರ ಬಯಕೆಗೆ ಮಲ್ನಾಡ್‌ ಸೋಲ್ಜರ್‌ ಅಕಾಡೆಮಿಯು ಸೋಪಾನವಾಯಿತು. ಮಲೆನಾಡು ಯುವಕರನ್ನು ಸೇನೆಗೆ ಸೇರಿಸುವ ಪ್ರಯತ್ನದ ಹಿಂದೆ ಹಲವರ ಶ್ರಮ ಇದೆ. ಮುಖ್ಯವಾಗಿ ನಿವೃತ್ತ ಯೋಧ ಕಿಶೋರ್‌ ಭೈರಾಪುರ ಅವರು ಪ್ರಯತ್ನಕ್ಕೆ ನಾಂದಿ ಹಾಡಿದರು.

ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅವರು ಪ್ರಸ್ತುತ ಇಂಡಿಯನ್‌ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹೋದ ಕಡೆಯಲ್ಲೆಲ್ಲಾ ಯುವಕರು ಸೇನೆ ಆಯ್ಕೆ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದರಂತೆ. ಅದು ಅವರಿಗೆ ಸೈನಿಕ ತರಬೇತಿ ಶಿಬಿರ ನಡೆಸಲು ಪ್ರೇರಣೆಯಾಯಿತು ಎನ್ನುತ್ತಾರೆ ಅವರು. ಕಿಶೋರ್‌ ಅವರಿಗೆ ಮುರುಘಾಮಠದ ಡಾ| ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೆಂಬಲವಾಗಿ ನಿಂತರು. ಕೇಂದ್ರ ಮೀಸಲು ಪಡೆಯ (ಸಿಆರ್‌ಪಿಎಫ್‌) ದಯಾನಂದ್‌, ಚರಣ್‌, ದೇವರಾಜ್‌, ಸಚಿನ್‌, ಸುಬೇದಾರ್‌ ಮಾಲತೇಶ್‌, ನಿವೃತ್ತ ಯೋಧ ಸುಭಾಷ್‌ ತೇಜಸ್ವಿ, ಸಾಗರದ ಅಣ್ಣಪ್ಪ ಎಳವರಸೆ, ಭದ್ರಾವತಿಯ ವಿಜಯೇಂದ್ರ, ಡಾ| ಕಿರಣ್‌, ಡಾ| ಭೋರಪ್ಪ, ಸುಭಾಷ್‌ ಕೌತಳ್ಳಿ ತಂಡವನ್ನು ಕೂಡಿಕೊಂಡರು.

ಇವರೊಂದಿಗೆ ಅಂತಾರಾಷ್ಟ್ರೀಯ ಯೋಗಪಟುಗಳಾದ ಅಪೂರ್ವ ಮತ್ತು ಪೂಜಾ ಭೈರಾಪುರ, ಶಿಕಾರಿಪುರದ ಸಾಧನಾ ಅಕಾಡೆಮಿ, ಆನಂದಪುರದ ಸಾಮಾಜಿಕ ಸಂಸ್ಥೆ ಆರ್ಮಿ ಟ್ರೂಪ್‌, ಸುಬ್ಬಣ್ಣ ನಾಯಕ್‌ ಅಕ್ಕಿ ಮಿಲ್, ಶಿವಮೊಗ್ಗದ ತರಕಾರಿ ವ್ಯಾಪಾರಿಗಳು, ಆಕರ್ಷ ವೈನ್ಸ್‌, ಅಕ್ಷರ ರೆಸಿಡೆನ್ಸಿಯಲ್ ಸ್ಕೂಲ್, ಜಯ ಕರ್ನಾಟಕ ಆಟೋ ಸಂಘ, ಬಸ್‌ ಕಂಡಕ್ಟರ್‌ಗಳ ಸಂಘದ ರಮಾನಂದ್‌ ಸೇರಿದಂತೆ ಹಲವರು ಕೈಜೋಡಿಸಿದರು. ಇದರ ಪರಿಣಾಮವಾಗಿ ಮುರುಘಾಮಠದ ಆವರಣದಲ್ಲಿ ಮೇ 6ರಿಂದ 19ರ ವರೆಗೆ ಉಚಿತವಾಗಿ ಕಠಿಣ ತರಬೇತಿ ನೀಡಲು ಸಾಧ್ಯವಾಯಿತು. ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ಕನಿಷ್ಠ 50 ಮಂದಿ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸ ತಂಡದಲ್ಲಿತ್ತು. ದೈಹಿಕ ಸಾಮಥ್ಯ, ಲಿಖೀತ ಪರೀಕ್ಷೆ, ದಾಖಲೆಗಳ ಪರಿಶೀಲನೆಯಲ್ಲಿ ಅಂತಿಮವಾಗಿ 29 ಯುವಕರು ಆಯ್ಕೆಯಾಗಿದ್ದರು.

ಆದರೆ ಅದರಲ್ಲಿ ಮೂವರು ಯುವಕರ ತೋಳುಗಳಲ್ಲಿ ಹಚ್ಚೆ (ಟ್ಯಾಟೂ) ಇದ್ದ ಕಾರಣ ನಿಯಮದ ಅನ್ವಯ ಅವರನ್ನು ಕೈ ಬಿಡಲಾಗಿದೆ.

Advertisement

ಹೆಚ್ಚಾದ ಬೇಡಿಕೆ: ಮಲ್ನಾಡ್‌ ಸೋಲ್ಜರ್‌ ಅಕಾಡೆಮಿಯ ಮೊದಲ ಪ್ರಯತ್ನದಲ್ಲೇ 26 ಯುವಕರು ಸೈನ್ಯಕ್ಕೆ ಸೇರಿದ ಬಳಿಕ ಈಗ ರಾಜ್ಯದ ವಿವಿಧೆಡೆ ಅಕಾಡೆಮಿಗೆ ಬೇಡಿಕೆ ಬಂದಿದೆ. ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲಿ ಮಂಡ್ಯ ಅಥವಾ ಮೈಸೂರು, ಅದಾಗಿ ಮೂರ್‍ನಾಲ್ಕು ತಿಂಗಳ ಬಳಿಕ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಸೇನೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅದಕ್ಕಾಗಿ ತಮ್ಮ ಜಿಲ್ಲೆಯ ಯುವಕರಿಗೆ ಈಗಲೆ ತರಬೇತಿ ನೀಡುವಂತೆ ಬೆಳಗಾವಿ, ರಾಮನಗರ, ಹೊಸದುರ್ಗ ಜಿಲ್ಲೆಗಳ ವಿವಿಧ ಸಂಘಟನೆಗಳ ಪ್ರಮುಖರು ಕಿಶೋರ್‌ ಅವರನ್ನು ಸಂಪರ್ಕ ಮಾಡಿದ್ದಾರೆ. ಆದರೆ, ಕಿಶೋರ್‌ ಅವರು ಆಯ್ಕೆ ಪ್ರಕ್ರಿಯೆ ಪ್ರಕಟಣೆ ಹೊರಡಿಸಿದ ಬಳಿಕ ಅದರ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next