ಶಿವಮೊಗ್ಗ: ಪುನರ್ವಸು ಮಳೆಯು ಎರಡು ದಿನಗಳಿಂದ ಬಿಡುವು ನೀಡಿದ್ದು ಮಲೆನಾಡಿನಲ್ಲಿ ಸೂರ್ಯನ ತಾಪ ಹೆಚ್ಚಾಗಿದೆ. ಮುಂಗಾರು ಆರ್ಭಟಿಸಬೇಕಾದ ಈ ಕಾಲದಲ್ಲಿ ಮಳೆ ಮಾಯವಾಗಿರುವುದು ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿದೆ.
Advertisement
ಜೂನ್‌ನಲ್ಲಿ ಮಳೆ ಸಂಪೂರ್ಣ ಕೈ ಕೊಟ್ಟಿತ್ತು. ಆದರೆ ಜುಲೈ ಮೊದಲ ವಾರದಿಂದಲೇ ಮಳೆ ಎಡೆಬಿಡದೆ ಸುರಿಯಿತು. ಇದರಿಂದ ಕೃಷಿ ಚಟುವಟಿಕೆಗಳು ಬಿರುಸಾಗಿ ಸಾಗಲಿಲ್ಲ. ಎರಡು ದಿನಗಳಿಂದ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆಗೆ ಅನುಕೂಲವಾಗಿತ್ತು. ಆದರೆ ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿಯುತ್ತಾ ಬಂದಿದ್ದು ರೈತರು ಆತಂಕದಲ್ಲೇ ಬಿತ್ತನೆ ಮುಂದುವರಿಸಿದ್ದಾರೆ.
Related Articles
Advertisement
ಇನ್ನು ಅತಿ ಹೆಚ್ಚು ಅಚ್ಚುಕಟ್ಟು ಹೊಂದಿರುವ ಭದ್ರಾ ಜಲಾಶಯ ಕೂಡ ಭರ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಡ್ಯಾಂನಲ್ಲಿ ಈವರೆಗೆ 134.1 ಅಡಿ ನೀರಿದ್ದು 23.06 ಟಿಎಂಸಿ ನೀರಿದೆ. ಡ್ಯಾಂನ ಗರಿಷ್ಠ ಸಾಮರ್ಥ್ಯ 72 ಟಿಎಂಸಿ. ರೈತರು ನೀರು ಬಿಡುವ ನಂಬಿಕೆ ಮೇಲೆ ಸಸಿ ಮಡಿ ಬಿಟ್ಟಿದ್ದು ಮಳೆಗಾಲದ ಬೆಳೆಗೂ ನೀರು ಸಿಗುವ ಸಾಧ್ಯತೆಗಳು ದೂರ ಇದೆ. ಶಿಕಾರಿಪುರದ ಅಂಜನಾಪುರ ಜಲಾಶಯ ಕೂಡ ಅರ್ಧ ಭರ್ತಿಯಾಗಿದ್ದು ಭತ್ತದ ಬೆಳೆಗೆ ನೀರು ಸಿಗುವುದು ಸಾಧ್ಯವಿಲ್ಲ.
ಶೇ.21ರಷ್ಟು ಮಳೆ ಕೊರತೆಮುಂಗಾರು ಪ್ರಾರಂಭದ ಜೂ. 1ರಿಂದ ಜು. 13ರವರೆಗೆ ಜಿಲ್ಲೆಯಲ್ಲಿ ಶೇ.21ರಷ್ಟು ಮಳೆ ಕೊರತೆಯಾಗಿದೆ. ಅದರಲ್ಲೂ ಸೊರಬ ಶೇ.42, ತೀರ್ಥಹಳ್ಳಿಯಲ್ಲಿ ಶೇ.40ರಷ್ಟು ಮಳೆ ಕೊರತೆ ಆಗಿದೆ. ಶಿಕಾರಿಪುರದಲ್ಲಿ ಶೇ.27, ಶಿವಮೊಗ್ಗದಲ್ಲಿ ಶೇ.18, ಭದ್ರಾವತಿಯಲ್ಲಿ ಶೇ.21ರಷ್ಟು, ಹೊಸನಗರ ಶೇ.16, ಸಾಗರದಲ್ಲಿ ಶೇ.1ರಷ್ಟು ಮಳೆ ಕೊರತೆಯಾಗಿದೆ. ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ, ಸೊರಬ ತಾಲೂಕುಗಳನ್ನು ಹಿಂಗಾರು ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿತ್ತು. ಜುಲೈನಲ್ಲಿ ದೊಡ್ಡ ಮಳೆಯಾಗುವ ಯಾವುದೇ ಲಕ್ಷಣಗಳು ಇಲ್ಲದ ಕಾರಣ ಬರ ಘೋಷಣೆ ಮುಂದುವರಿಯುವ ಸಾಧ್ಯತೆ ಇದೆ.