ಆನಂದಪುರ (ಸಾಗರ) : ಭಾರಿ ಮಳೆಯಿಂದಾಗಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 90 ಕೋಟಿ ರೂಪಾಯಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಪುಷ್ಯಾ ಮಳೆಯ ಅಬ್ಬರಕ್ಕೆ ನಲುಗಿರುವರಿಗೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅನಾಹುತಗಳು ಸಂಭವಿಸಿದ್ದು, ಮನೆಗಳು ಕುಸಿದು ಬಿದ್ದಿವೆ, ರಸ್ತೆಗಳು, ಹೊಲಗದ್ದೆಗಳು ತೋಟಗಳು ಮಳೆಯಿಂದಾಗಿ ಕೊಚ್ಚಿ ಹೋಗಿದ್ದು ಶಾಲೆ, ಅಂಗನವಾಡಿ ಸೇರಿದಂತೆ ಕೆರೆಯ ನಾಲೆಗಳು, ಕಿರು ಸೇತುವೆಗಳಿಗೆ ಹಾನಿ ಸಂಭವಿಸಿದೆ. ಆನಂದಪುರ, ಅಡೂರು, ಯಡೇಹಳ್ಳಿ, ಹೊಸಕೊಪ್ಪ ,ಕಣ್ಣೂರು, ಆಚಾಪುರ, ಕೈರಾ ಸೇರಿ ಅನೇಕ ಭಾಗದಲ್ಲಿ ಮಳೆಯಿಂದ ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಈ ಬಾರಿ ಸುರಿದ ಮಳೆ ಹಾಗೂ ಬೀಸಿದ ಗಾಳಿಯಿಂದ ಸುಮಾರು 90 ಕೋಟಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ತಿಳಿಸಿದರು. ದಾಖಲೆ ಇರುವಂತಹ ಮನೆಗಳು ಕುಸಿದರೆ 1ಲಕ್ಷದ 20 ಸಾವಿರ ರೂ. ಹಣ ನೀಡಲಾಗುವುದು. ಹಕ್ಕುಪತ್ರ ಇಲ್ಲದಿರುವಂತಹ ಮನೆಗಳಿಗೆ ಅನಾಹುತ ಉಂಟಾದರೆ ಅಂತಹ ಮನೆಗಳಿಗೆ 1 ಲಕ್ಷ ರೂ ಪರಿಹಾರ ನೀಡುವ ಬಗ್ಗೆ ಸರ್ಕಾರ ಆದೇಶ ನೀಡಿದೆ ಎಂದು ತಿಳಿಸಿದರು.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ನೊಂದ ಕುಟುಂಬಗಳಿಗೆ ಸಾಂತ್ವನ ತಿಳಿಸಿ ವೈಯಕ್ತಿಕ ಧನ ಸಹಾಯ ನೀಡಿದರು. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಸಂಭವಿಸಿರುವಂತಹ ಅನಾಹುತಗಳ ಪಟ್ಟಿಮಾಡಿ ತಕ್ಷಣವೇ ವರದಿ ಸಲ್ಲಿಸಲು ಸೂಚಿಸಿದರು. ನಾನು ಯಾವಾಗಲೂ ಕ್ಷೇತ್ರದ ಜನತೆಯೊಂದಿಗೆ ಇದ್ದೇನೆ ಯಾವುದೇ ಸಂದರ್ಭದಲ್ಲೂ ನನ್ನ ಕ್ಷೇತ್ರದ ಜನತೆಗೆ ಸಂಕಷ್ಟವಾದರೆ ತಕ್ಷಣವೇ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಿತಾ ಕುಮಾರಿ, ಸೋಮಶೇಖರ್ ಲಗ್ಗೆರೆ, ಚಂದ್ರಪ್ಪ, ರಮಾನಂದ್ ಸಾಗರ್, ಚೇತನ್ ರಾಜ್ ಕಣ್ಣೂರ್, ಮಂಜುನಾಥ್ ದಾಸನ್, ಶರತ್ ನಾಗಪ್ಪ, ಕಲೀಮುಲ್ಲಾ ಖಾನ್, ರೆಹಮತುಲ್ಲಾ, ಗಜೇಂದ್ರ ಯಾದವ್, ಹಾಗೂ ಪಕ್ಷದ ಅನೇಕ ಮುಖಂಡರು ಇದ್ದರು.