Advertisement

ಹಾಸ್ಟೆಲ್ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

12:54 PM Aug 24, 2019 | Naveen |

ಶಿವಮೊಗ್ಗ: ಹಾಸ್ಟೆಲ್ ಸ್ಥಳಾಂತರ ವಿರೋಧಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ರಸ್ತೆ ತೆರವು ಮಾಡುವಂತೆ ಪೊಲೀಸರು ಎಷ್ಟೇ ಹೇಳಿದರೂ ಕೇಳಲಿಲ್ಲ. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ- ನೂಕಾಟ ನಡೆಯಿತು.

Advertisement

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾನಗರದಲ್ಲಿ ನಡೆಯುತ್ತಿದ್ದು ಇತ್ತೀಚೆಗೆ ನೆರೆ ಹಾವಳಿಯಿಂದಾಗಿ ಹಾಸ್ಟೆಲ್ ಕಟ್ಟಡಕ್ಕೆ ನೀರು ನುಗ್ಗಿದ್ದರಿಂದ ಅಲ್ಲಿನ ವಿದ್ಯಾರ್ಥಿಗಳನ್ನು ನವುಲೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಹೀಗೆ ಸ್ಥಳಾಂತರಿಸುವಾಗ ವಿದ್ಯಾರ್ಥಿಗಳ ಗಮನಕ್ಕೆ ತಂದಿರಲಿಲ್ಲ. ಸಹ್ಯಾದ್ರಿ ಕಾಲೇಜು ಸೇರಿದಂತೆ ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿತ್ತು. ಶುಕ್ರವಾರ ವಿದ್ಯಾರ್ಥಿಗಳು ತಮ್ಮ ಲಗೇಜ್‌ ಸಮೇತ ದಿಢೀರ್‌ ಜಿಲ್ಲಾಧಿಕಾರಿಗಳ ಎದುರು ಇರುವ ರಸ್ತೆಯಲ್ಲಿ ಪ್ರತಿಭಟನೆಗಿಳಿದರು. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರೂ ಕೇಳದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಎಸ್‌ಪಿ ಕೆ.ಎಂ. ಶಾಂತರಾಜು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಿದರು. ಈಗಲೇ ನಮಗೆ ಹಾಸ್ಟೆಲ್ ವ್ಯವಸ್ಥೆ ಆಗಬೇಕು. ಅಲ್ಲಿವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ವಿದ್ಯಾರ್ಥಿಗಳು ರಸ್ತೆ ಬಿಟ್ಟು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next