ಶಿವಮೊಗ್ಗ: ಮಲವಗೊಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಗಲೀಕರಣ ಮಾಡಬಾರದೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಗುರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 206 ಮಲವಗೊಪ್ಪ ಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಿದೆ. ಈಗ ಮತ್ತೂಮ್ಮೆ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಮಾಡಬಾರದು ಎಂದು ಒತ್ತಾಯಿಸಿದರು.
ಮಲವಗೊಪ್ಪದಲ್ಲಿ ಹಿಂದೆ ಚತುಷ್ಪಥ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮುಂದೆ ರಸ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದ ಕಾರಣ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ನಂತರದಲ್ಲಿ ರಸ್ತೆ ಪಕ್ಕದ ಸ್ವತ್ತಿನ ಮಾಲೀಕರು ಮನೆ, ಮಳಿಗೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ದೇವಾಲಯದ ಮುಂಭಾಗಕ್ಕೆ ಹಾಗೂ ಪುಷ್ಕರಣಿ ಸುತ್ತಲೂ ಕಾಂಪೌಂಡ್ ಮೆಶ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ರಸ್ತೆಯ ಇಕ್ಕೆಲಗಳಲ್ಲಿರುವ ಹೆಚ್ಚಿನ ಭಾಗದ ಸ್ವತ್ತಿನ ಮಾಲೀಕರು ರೈತರಾಗಿದ್ದು, ಅವರ ಜಮೀನುಗಳು ಮಲವಗೊಪ್ಪ ಭಾಗದಲ್ಲಿ ಇರುವುದರಿಂದ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಿದೆ. ರೈತರ ವಾಸದ ಸ್ಥಳಕ್ಕೆ ಧಕ್ಕೆಯಾದರೆ ಜೀವನಕ್ಕೆ ತೊಂದರೆಯಾಗುತ್ತದೆ ಎಂದರು.
ರಸ್ತೆ ಪಕ್ಕದಲ್ಲೇ ಎರಡು ಸರ್ಕಾರಿ ಶಾಲೆಗಳು, ದೇವಾಲಯಗಳು, ಕಾಡಾ ಕಚೇರಿ ಇದೆ. ನೀರಿನ ಟ್ಯಾಂಕ್ ಇದೆ. ರಸ್ತೆ ವಿಸ್ತರಣೆ ಮಾಡುವುದರಿಂದ ಈ ಸ್ವತ್ತುಗಳಿಗೆ ಹಾನಿಯಾಗುತ್ತದೆ. ದೇವಾಲಯಗಳ ಭಕ್ತರ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಬಿ. ಅಶೋಕ ನಾಯ್ಕ , ಮಾಜಿ ಶಾಸಕರಾದ ಶಾರದಾ ಪೂರ್ಯನಾಯ್ಕ ಮೊದಲಾದವರು ರಸ್ತೆ ಅಗಲೀಕರಣ ನಡೆಸದಂತೆ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದ್ದರೂ, ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಆರೋಪಿಸಿದರು.
ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದಂತೆ ರಾಷ್ಟ್ರೀಯ ಹೆದ್ದಾರಿ 206 ನ್ನು ಮಲವಗೊಪ್ಪ ಭಾಗದಲ್ಲಿ ಅಗಲೀಕರಣ ಮಾಡದೆ, ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಜೋಡಣೆಗೊಳಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ನಿವಾಸಿಗಳಾದ ಯು.ಜಿ. ನಾಗರಾಜ್, ಮಂಜಪ್ಪ, ಸುರೇಶ್ ನಾಯ್ಕ, ಓಂಕಾರಪ್ಪ, ಗಣೇಶ ನಾಯ್ಕ, ವಾಸು, ಸೋನಾಬಾಯಿ ಮತ್ತಿತರರು ಇದ್ದರು.