Advertisement

ಪ್ರವಾಹ ಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಿ

11:44 AM Aug 12, 2019 | Team Udayavani |

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದು, ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಜನವಸತಿ ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಖಾಲಿ ಮಾಡುವುದು, ನೆರೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸ್ವಚ್ಛತೆಯನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳುವುದು ಸೇರಿದಂತೆ ನೆರೆ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮಳೆ ನೀರು ಕಡಿಮೆಯಾಗುತ್ತಿದ್ದು, ಎಲ್ಲಾ ಇಲಾಖೆಗಳು ಸಮನ್ವಯದಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಶಾಲೆಗಳ ಸುರಕ್ಷತೆ ಖಾತ್ರಿಪಡಿಸಿ: ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿರುವ ಶಾಲೆಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿಯೊಂದು ಶಾಲೆಗೆ ಭೇಟಿ ನೀಡಿ ಸುರಕ್ಷತೆಯನ್ನು ನಾಳೆ ಸಂಜೆ ಒಳಗಾಗಿ ದೃಢೀಕರಿಸಬೇಕು. ಗೋಡೆ ಕುಸಿದು ಅಪಾಯ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಅತಿವೃಷ್ಟಿಯಿಂದ ಶಾಲಾ ಮಕ್ಕಳ ಪುಸ್ತಕ, ಸಮವಸ್ತ್ರ ಇತ್ಯಾದಿ ಹಾನಿಯಾಗಿರುವ ಪ್ರಮಾಣವನ್ನು ಪರಿಶೀಲಿಸಿ ಹೊಸದಾಗಿ ಪೂರೈಕೆಗೆ ತಕ್ಷಣ ಬೇಡಿಕೆ ಸಲ್ಲಿಸಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆಗೆ ಸೂಚನೆ: ನೆರೆ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಯುದ್ಧೋಪಾಯಲ್ಲಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರಿನ ಬಗ್ಗೆ ಅತೀವ ಜಾಗ್ರತೆ ವಹಿಸಬೇಕಾಗಿದ್ದು, ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು. ಅಗತ್ಯ ಔಷಧಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಬೇಕು. ಆರೋಗ್ಯ ಇಲಾಖೆ ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ವರದಿಯನ್ನು ಸಲ್ಲಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ ಜತೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳು ನೆರೆ ನೀರು ನಿಂತಿರುವ ಕಡೆಗಳಲ್ಲಿ ಅದನ್ನು ಪಂಪ್‌ ಮಾಡುವ ಮೂಲಕ ಖಾಲಿ ಮಾಡಬೇಕು. ನೆರೆ ನೀರಿನಲ್ಲಿ ಹರಿದು ಬಂದಿರುವ ತ್ಯಾಜ್ಯಗಳನ್ನು ಆದಷ್ಟು ಬೇಗನೆ ತೆರವು ಮಾಡಿ ವಿಲೇವಾರಿ ಮಾಡಬೇಕು. ನಿಂತ ನೀರಿನಲ್ಲಿ ಸೊಳ್ಳೆ ಹುಟ್ಟಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

Advertisement

ಕ್ಷೇತ್ರಗಳಿಗೆ ಭೇಟಿ ನೀಡಿ: ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇತ್ಯಾದಿ ಇಲಾಖೆಗಳ ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯನ್ನು ಅಂದಾಜಿಸಬೇಕು. ಗ್ರಾಮಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಇರುವುದನ್ನು ಖಾತ್ರಿಪಡಿಸಬೇಕು. ವಿದ್ಯಾರ್ಥಿಗಳ ಹಾಸ್ಟೆಲ್ಗಳ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದರು.

ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next