ಶಿವಮೊಗ್ಗ: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸರಳವಾಗಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಶ್ರೀ ವಾಸವಿ ಪೀಠದ ಗುರುಪೀಠಾಧಿ ಪತಿಯಾಗಿ ಪೀಠಾರೋಹಣ ಮಾಡಿದರು.
ಶ್ರೀ ವಾಸವಿ ಪೀಠದ ಗುರುಪೀಠಾ ಧಿಪತಿಯಗಿದ್ದ ಶ್ರೀ ಚಂದ್ರಶೇಖರ ಸ್ವಾಮೀಜಿ ಐಕ್ಯರಾದ ಮೇಲೆ ಅನೇಕ ವರ್ಷಗಳಿಂದ ಪೀಠಕ್ಕೆ ಗುರುಗಳು ಇರಲಿಲ್ಲ . ಇದೀಗ ಎರಡನೇ ಗುರುಪೀಠಾಧಿ ಪತಿಯಾಗಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೀಠಾರೋಹಣ ಮಾಡಿದ್ದಾರೆ . ನೂತನ ಶ್ರೀಗಳು ಪೂರ್ವಾಶ್ರಮದಲ್ಲಿ ಶಿವಮೊಗ್ಗ ನಗರದ ಭೂಪಾಳಂ ಕುಟುಂಬದವರಾಗಿದ್ದಾರೆ.
ಶಿವಮೊಗ್ಗ ವಾಸವಿ ವಿದ್ಯಾಲಯದಲ್ಲಿ ಬಾಲ್ಯ ಶಿಕ್ಷಣ ಮುಗಿಸಿದ ನಂತರದಲ್ಲಿ ಬೆಂಗಳೂರಿನ ಕ್ರೈಸ್ತ್ ಕಾಲೇಜಿನಲ್ಲಿ ಪದವಿ ವ್ಯಾಸಂಗದಲ್ಲಿ ರ್‍ಯಾಂಕ್ ಪಡೆದು ಚಿನ್ನದ ಪದಕ ಪಡೆಯುತ್ತಾರೆ. ಹೃಷಿಕೇಷದ ದಯಾನಂದ ಸರಸ್ವತಿಗಳ ಬಳಿಯಲ್ಲಿ ದೀಕ್ಷೆ ಪಡೆದು ಆಧ್ಯಾತ್ಮಿಕ ಜ್ಞಾನದ ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ವಾಸವಿ ಪೀಠದ ಪೀಠಾಧಿಪತಿಯಾಗಿದ್ದಾರೆ.
ಪೀಠಾರೋಹಣ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಚಿನ್ಮಯ್ ಮಿಷನ್‌ನ ಸ್ವಾಮಿ ಬ್ರಹ್ಮಾನಂದ ಗುರೂಜಿ ಆಶೀರ್ವಚನ ನೀಡಿದರು. ಉಪಮುಖ್ಯಮಂತ್ರಿ ಡಾ| ಸಿ.ಎನ್. ಅಶ್ವತ್ಥ ನಾರಾಯಣ್, ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ. ಹುಣಸೂರು ಶಾಸಕ ಮಂಜುನಾಥ್, ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ , ಪ್ರತಿಭಾ ಅರುಣ್ , ರಾಜ್ಯ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ರವಿಶಂಕರ್ ಇದ್ದರು.