Advertisement

ನಾಗಸಮುದ್ರ ಗೋಲಿಬಾರ್‌ ಕರಾಳ ಅಧ್ಯಾಯ

12:48 PM May 27, 2019 | Naveen |

ಶಿವಮೊಗ್ಗ: ರಾಜ್ಯದಲ್ಲಿ ರೈತರ ಮೇಲೆ ಪೊಲೀಸರ ಬಂದೂಕು ಸದ್ದು ಮಾಡಿದರೆ ರೈತ ಸಂಘಟನೆಯು ಚಳುವಳಿಯ ಮೂಲಕ ಸದ್ದು ಮಾಡಬೇಕಾಗುತ್ತದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

Advertisement

ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹುತಾತ್ಮ ರೈತರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1982 ಮೇ 25 ರಂದು ರೈತರ ಮೇಲೆ ನಡೆದ ಗೋಲಿಬಾರ್‌ ರೈತಸಂಘದ ಇತಿಹಾಸದಲ್ಲಿಯೇ ಒಂದು ಕರಾಳ ಅಧ್ಯಾಯ. ರಾಜ್ಯದಲ್ಲಿ ರೈತಸಂಘವು ವಿಜೃಂಭಿಸಿದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ರೈತಸಂಘಕ್ಕೆ ಪರ್ಯಾಯವಾಗಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ರೈತ ಕಾರ್ಮಿಕ ಸಂಘವನ್ನು ಸ್ಥಾಪಿಸಲು ಮುಂದಾಗಿತ್ತು. ರೈತರು ಸ್ವಯಂ ಪ್ರೇರಿತವಾಗಿ ನಾಗಸಮುದ್ರ ಗ್ರಾಮದಲ್ಲಿ ಸೇರಿ ಸಭೆ ನಡೆಸಲು ಮುಂದಾದರು. ಪೊಲೀಸ್‌ ಅಧಿಕಾರಿಗಳಿಗೆ ಸುತ್ತಲೂ ದಿಗ್ಭಂಧನ ಹಾಕಿ ಪ್ರತಿಭಟನೆ ನಡೆಸಲಾಯಿತು. ಈ ಚಳುವಳಿಗೆ ಸುತ್ತಮುತ್ತಲಿನ ರೈತರು ಸಾಗರೋಪಾದಿಯಲ್ಲಿ ಹರಿದು ಬಂದರು. ಹೀಗೆ ಶಾಂತಿಯುತವಾಗಿ ನಡೆಯಿತು. ಅದರೆ ಸಂಜೆ ವೇಳೆಯಲ್ಲಿ ಪೊಲೀಸರ ಅಸಭ್ಯ ವರ್ತನೆಯಿಂದಾಗಿ ರೈತರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆ ವೇಳೆಯಲ್ಲಿ ಪೊಲೀಸರು ಗುಂಡು ಹಾರಿಸಿ ಮೂವರು ರೈತರನ್ನು ಬಲಿತೆಗೆದುಕೊಂಡರು ಎಂದು ಗತಕಾಲದ ನೆನೆಪು ಮಾಡಿಕೊಂಡರು. ಅಂದಿನಿಂದ ಇಂದಿನವರೆಗೂ ರೈತಸಂಘ ರೈತರ ಪರವಾದ ಹೋರಾಟಗಳನ್ನು ನಡೆಸುತ್ತಲೇ ಬರುತ್ತಿದೆ ಎಂದರು.

ಆದರೆ ನಮ್ಮ ರೈತರು ಅಂದಿಗಿಂತ ಇಂದು ವಿಭಿನ್ನವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಸಂಬದ್ಧ ಕಾಯ್ದೆಗಳು, ಕಳಪೆ ಗುಣಮಟ್ಟದ ಬಿತ್ತನೆ ಬೀಜ, ಬೆಲೆ ಕಸಿತ, ಮಾರುಕಟ್ಟೆ ಸಮಸ್ಯೆ, ಸಾಲ ಸೌಲಭ್ಯದ ಸಮಸ್ಯೆ, ವಿದೇಶಿ ಕಂಪನಿಗಳ ಹಾವಳಿ, ಮಧ್ಯವರ್ತಿಗಳ ಹಾವಳಿ, ಕೂಲಿ ಕಾರ್ಮಿಕರ ಸಮಸ್ಯೆ, ಕೃಷಿ ಯಂತ್ರೋಪಕರಣಗಳ ಸಮಸ್ಯೆ ಮತ್ತು ಫಸಲಿಗೆ ತಗುಲುವ ಆಧುನಿಕ ರೋಗಳ ಹತೋಟಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ರೈತರನ್ನು ಅಧೋಗತಿಗೆ ತಂದು ನಿಲ್ಲಿಸಿವೆ. ಆದ್ದರಿಂದ ಸರ್ಕಾರಗಳು ರೈತರ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಇಡೀ ದೇಶದ ಚಿತ್ರಣವೇ ಬದಲಾಗುವ ಕಾಲ ತುಂಬಾ ಹತ್ತಿರ ಇದೆ ಎಂದರು.

ರೈತಸಂಘದ ಕಾರ್ಯಾಧ್ಯಕ್ಷ ಎಚ್.ಆರ್‌. ಬಸವರಾಜಪ್ಪ ಮಾತನಾಡಿ, ರೈತ ಸಂಘಕ್ಕೆ ಯಾವುದೇ ಜಾತಿ, ಮತದ ಭೇದವಿಲ್ಲ. ಭೂ ತಾಯಿಯನ್ನು ನಂಬಿ ಬದುಕುತ್ತಿರುವ ಎಲ್ಲರೂ ರೈತರೇ ಎಂದರು.

Advertisement

ಇಂದು ರೈತಸಂಘ ವಿಭಜನೆ ಆಗಿರುವುದರಿಂದ ಅದರ ಶಕ್ತಿ ಕ್ಷೀಣಿಸಿದೆ ಎಂದುಕೊಂಡರೆ ಅದು ತಪ್ಪು. ವಿಭಜನೆ ಆಗಿರುವುದು ನಿಜ. ಆದರೆ ಸಮಸ್ಯೆ ಒಂದೇ. ಅವಶ್ಯಕತೆ ಬಿದ್ದರೆ ಎಲ್ಲರೂ ಒಗ್ಗೂಡಿ ನಾವೆಲ್ಲ ಒಂದೇ ಎಂದು ಹೋರಾಟ ಮಾಡುತ್ತೇವೆ. ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಸಂದರ್ಭ ಬಂದರೆ ಯಾವ ರೈತನೂ ಕೂಡ ರಾಜಿಯಾಗುವ ಮಾತೇ ಇಲ್ಲ ಎಂದರು.

ಪ್ರಖ್ಯಾತ ನ್ಯಾಯವಾದಿ ರವಿವರ್ಮ ಕುಮಾರ್‌ ಮಾತನಾಡಿ, 1982 ಮೇ 25 ನೇ ದಿನ ಗೋಲಿಬಾರ್‌ ನಡರದಂತಹ ಸಂದರ್ಭದಲ್ಲಿ ಪೊಲೀಸರ ಕ್ರೌರ್ಯ ಎಷ್ಟಿತ್ತೆಂದರೆ ನಾಗಸಮುದ್ರ ಮತ್ತು ಮಂಗೋಟೆ ಗ್ರಾಮಗಳಲ್ಲಿ ಗಂಡಸರು ಮನೆ ಬಿಟ್ಟು ತಲೆ ಮರೆಸಿಕೊಂಡಿದ್ದರು. ಶೋಧನೆಗೆಂದು ಬಂದ ಪೊಲೀಸ್‌ ಅಧಿಕಾರಿಗಳು ಹೆಣ್ಣು ಮಕ್ಕಳ ಎದೆಯನ್ನು ಕೈಯಿಂದ ಮುಟ್ಟಿ ನೋಡಿ ಹೆಣೋ¡ ಗಂಡೋ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದರು ಎಂದು ಅಂದಿನ ಪೊಲೀಸರ ದೌರ್ಜನ್ಯವನ್ನು ಮೆಲುಕು ಹಾಕಿದರು. ಮುಂದಿನ ದಿನಗಳಲ್ಲಿ ರೈತ ಚಳುವಳಿ ಇನ್ನಷ್ಟು ಗಟ್ಟಿಯಾಗಬೇಕು ಎಂದರು. 80 ರ ದಶಕದಲ್ಲಿ ಯಾವ ರೀತಿಯ ಹೋರಾಟದ ಹಸಿವಿತ್ತೋ ಹಾಗೆ ಮುಂದೆಯೂ ಕೂಡ ಅದೇ ಹುಮ್ಮಸ್ಸಿನಿಂದ ಮುನ್ನುಗ್ಗುವ ಅನಿವಾರ್ಯತೆ ಇದೆ ಎಂದರು. ಇದೇ ಸಂದರ್ಭದಲ್ಲಿ ಗೋಲಿಬಾರ್‌ ಪ್ರಕರಣದಲ್ಲಿ ಹೋರಾಡಿ ಜೈಲು ಸೇರಿದ್ದ ರೈತರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ರೈತರ ಸ್ಮಾರಕವನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ, ಸಾಮಾಜಿಕ ಕಾರ್ಯಕರ್ತ ಅಮ್ರನ್‌, ಡಾ| ಚಿಕ್ಕಸ್ವಾಮಿ, ಶಾಮಣ್ಣ, ಅನುಸೂಯಮ್ಮ, ಚಂದ್ರಪ್ಪ, ಪಂಚಾಕ್ಷರಪ್ಪ, ರವಿ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next