ಶಿವಮೊಗ್ಗ: ಪ್ರಸ್ತುತ ಸಂದರ್ಭದಲ್ಲಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಪ್ರತಿ ವಿಧಾನ ಪರಿಷತ್ ಹಾಗೂ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ತಲಾ ರೂ.1 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಅನುದಾನ ಮಂಜೂರಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಿ.ಟಿ. ರಾಜೇಗೌಡ ತಿಳಿಸಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಸಕ್ತ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪ್ರಾಧಿಕಾರದಿಂದ ಕೈಗೊಳ್ಳುವ ಕಾಮಗಾರಿಗಳು ಹಾಗೂ ಸಮಸ್ಯೆಯ ಪರಿಹಾರಗಳ ಕುರಿತು ಚರ್ಚಿಸಲಾಯಿತು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಗೊಳಪಡುವ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುವ ಸುಮಾರು 50 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಪ್ರಾಧಿಕಾರದ ಅಧ್ಯಕ್ಷ ಡಿ.ಟಿ.ರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ 13ಜಿಲ್ಲೆಗಳು ವಿಶಾಲ ಭೂ ಪ್ರದೇಶ ಹೊಂದಿದ್ದು, ಜಿಪಂಗಳಿಗೆ ಬಿಡುಗಡೆಯಾಗುವ ಅನುದಾನವೂ ಕಡಿಮೆಯಾಗಿದೆ. ಆದ್ದರಿಂದ ಪ್ರಾಧಿಕಾರದ ವತಿಯಿಂದ ಜಿಪಂ ವ್ಯಾಪ್ತಿಗೂ ಅನುದಾನ ಬಿಡುಗಡೆಗೊಳಿಸಬೇಕು ಎಂದು ದಾವಣಗೆರೆ ಜಿಪಂ ಅಧ್ಯಕ್ಷರು ಪ್ರಾಧಿಕಾರದ ಅಧ್ಯಕ್ಷರನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಸಭೆಯ ನಡಾವಳಿಯಲ್ಲಿ ಸೇರಿಸಲಾಗುವುದಲ್ಲದೇ ಸರ್ಕಾರದ ಗಮನ ಸೆಳೆಯಲಾಗುವುದು. ಅಗತ್ಯವಿದ್ದಲ್ಲಿ ಅಧ್ಯಕ್ಷರ ವಿವೇಚನಾ ನಿಧಿಯನ್ನು ಬಳಸಿಕೊಳ್ಳಲು ಯತ್ನಿಸಬಹುದಾಗಿದೆ ಎಂದು ಮಂಡಳಿಯ ಅಧ್ಯಕ್ಷ ರಾಜೇಗೌಡ ಅವರು ಹೇಳಿದರು.
ಸರ್ಕಾರಕ್ಕೆ ಸಲ್ಲಿಸಲಾಗಿದ್ದ 70 ಕೋಟಿ ರೂ.ಗಳ ಪ್ರಸ್ತಾವನೆಯ ಪೈಕಿ ಕಳೆದ ಬಜೆಟ್‌ನಲ್ಲಿ 27.42ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಈ ಹಿಂದೆ ಬಳಕೆಯಾಗದೆ ಉಳಿದ 23ಕೋಟಿ ರೂ.ಗಳ ಅನುದಾನಕ್ಕೆ 300 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಸಭೆಯಲ್ಲಿದ್ದ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವಾನ್ ಡಿ’ಸೋಜ ಅವರು ಮಾತನಾಡಿ, ಪ್ರದೇಶಾಭಿವೃದ್ಧಿ ಮಂಡಳಿಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು, ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಿಂದ ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಗೋಡೆ ಕುಸಿತ, ರಸ್ತೆ ದುರಸ್ತಿ, ಕಾಲುಸಂಕ ನಿರ್ಮಾಣ, ಕೆರೆ-ಕಟ್ಟೆ-ಕಾಲುವೆಗಳ ದುರಸ್ತಿಗೆ ಅನುದಾನದ ಅಗತ್ಯವಿದೆ. ಮಂಡಳಿಯು ಕೈಗೊಳ್ಳುವ ಕಾಮಗಾರಿ ಹಾಗೂ ಯೋಜನೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನ ಬಹಳ ಕಡಿಮೆ. ಆದ್ದರಿಂದ ಇನ್ನಷ್ಟು ಹೆಚ್ಚಿನ ಮೊತ್ತದ ಅನುದಾನ ಅಗತ್ಯವಿದ್ದು, ಅದಕ್ಕಾಗಿ ಪ್ರತ್ಯೇಕ ಕ್ರಿಯಾಯೋಜನೆ ಸಲ್ಲಿಸಿ, ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಬೇಕೆಂದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರು ಅದಕ್ಕೆ ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕೆಲವು ಜಿಲ್ಲೆಗಳಿಗೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆದು ಹೆಚ್ಚಿನ ಅನುದಾನ ಪಡೆಯುತ್ತಿದ್ದಾರೆ. ಇದರಿಂದಾಗಿ ಮಲೆನಾಡಿನ ಜಿಲ್ಲೆಗಳಿಗೆ ಅನುದಾನದ ಕೊರತೆ ಕಾಣುತ್ತಿದೆ. ಇದನ್ನು ಸರಿದೂಗಿಸಿ ಮಲೆನಾಡಿನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಕಾಯ್ದಿರಿಸುವಂತೆ ಅವರು ಮನವಿ ಮಾಡಿದರು. ಸಭೆಯಲ್ಲಿ ಶಾಸಕರಾದ ಡಿ.ಎಸ್. ಸುರೇಶ್, ಸಿ.ಎಂ. ನಿಂಬಣ್ಣನವರ್, ಹರೀಶ್ ಪೂಂಜಾ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಧರ್ಮಸೇನ, ಶ್ರೀಕಾಂತ್ ಎಲ್., ಆಡಳಿತಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮತ್ತಿತರರು ಇದ್ದರು.
ರಜತ ಮಹೋತ್ಸವಕ್ಕೆ ಸಿದ್ಧತೆ: ಪ್ರಸಕ್ತ ಸಾಲಿನಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಚಟುವಟಿಕೆಗಳು ಕಾರ್ಯಾರಂಭಗೊಂಡು ಸುಮಾರು 25 ಸಂವತ್ಸರಗಳು ಪೂರ್ಣಗೊಳ್ಳುತ್ತಿರುವ ಶುಭ ಸಂದರ್ಭದ ಸವಿನೆನಪಿಗಾಗಿ ರಜತ ಮಹೋತ್ಸವ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಅದಕ್ಕೆ ಪೂರಕವಾಗಿ ಎಲ್ಲಾ ಸದಸ್ಯ ಅಗತ್ಯ ಸಲಹೆ-ಸಹಕಾರ ನೀಡುವಂತೆ ಮಂಡಳಿಯ ಅಧ್ಯಕ್ಷ ರಾಜೇಗೌಡ ಅವರು ಸದಸ್ಯರಲ್ಲಿ ಮನವಿ ಮಾಡಿದರು. ಸಂಸ್ಥಾಪಕರು, ಈವರೆಗಿನ ಅಧ್ಯಕ್ಷರು, ಸದಸ್ಯರನ್ನು ಸಹ ಆಹ್ವಾನಿಸಲಾಗುವುದು. ಡಾಕ್ಯುಮೆಂಟರಿ ಕೂಡ ಮಾಡಲಾಗುವುದು. ಎಲ್ಲ ಶಾಸಕರಿಗೂ ಕಾರ್ಯಕ್ರಮದ ರೂಪುರೇಷೆ ಕಳುಹಿಸಲು ಸೂಚಿಸಿದರು.