ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಎನಿಸಿರುವ ಶಿವಮೊಗ್ಗ ತಾಲೂಕು ಬಿಜೆಪಿಗೆ ಈ ಬಾರಿಯೂ ಕೈ ಹಿಡಿಯುವ ನಿರೀಕ್ಷೆಯಲ್ಲಿದೆ. ಇತ್ತ ಮೈತ್ರಿಕೂಟ ಲೀಡ್ ಪಡೆಯದಿದ್ದರೂ ಉಪ ಚುನಾವಣೆಗಿಂತಲೂ 20 ಸಾವಿರ ಹೆಚ್ಚು ಮತ ಪಡೆಯುವ ಉತ್ಸಾಹದಲ್ಲಿದೆ. ನಗರ ಪ್ರದೇಶದ ಬಿಜೆಪಿ ಕೈ ಹಿಡಿಯುತ್ತಾರೋ ಅಥವಾ ಜೆಡಿಎಸ್ ಕೈ ಹಿಡಿಯತ್ತಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ ಬಿಜೆಪಿಗೆ ಒಂದು ಲಕ್ಷ ಮತಗಳು ಬಂದಿದ್ದವು. ಈ ಚುನಾವಣೆಯಲ್ಲಿ 1.70 ಸಾವಿರ ಮಂದಿ ಮತ ಚಲಾಯಿಸಿದ್ದರು. 40 ಸಾವಿರ ಮತಗಳ ಅಂತರದಿಂದ ಶಾಸಕ ಕೆ.ಎಸ್. ಈಶ್ವರಪ್ಪ ಜಯ ಗಳಿಸಿದ್ದರು. ಅಕ್ಟೋಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ 1.29 ಸಾವಿರ ಮಂದಿ ಮತ ಚಲಾಯಿಸಿದ್ದರು. ಈ ವೇಳೆ ಬಿಜೆಪಿಗೆ 25 ಸಾವಿರ ಮತಗಳ ಲೀಡ್ ಬಂದಿತ್ತು. ಜೆಡಿಎಸ್ 50 ಸಾವಿರ ಮತ ಪಡೆಯಲು ಯಶಸ್ವಿಯಾಗಿತ್ತು. ಈ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಗಿಂತಲೂ 8 ಸಾವಿರ (1.78ಲಕ್ಷ) ಹೆಚ್ಚಿನ ಮತದಾನವಾಗಿದ್ದು ಈ ಮತಗಳು ಯುವಕರದ್ದಾಗಿದ್ದು ಅವು ಸಹ ಮೋದಿ ಅಲೆಯಲ್ಲಿ ಬಿಜೆಪಿ ಪಾಲಾಗುವ ನಿರೀಕ್ಷೆ ಇಟ್ಟುಕೊಂಡಿದೆ. ನಗರದಲ್ಲಿ 1 ಲಕ್ಷಕ್ಕೂ ಅಧಿಕ ಮತ ಪಡೆಯುವ ಜತೆಗೆ 40 ಸಾವಿರಕ್ಕೂ ಹೆಚ್ಚು ಲೀಡ್ ಕೊಡಬೇಕೆಂಬ ದೃಷ್ಟಿಯಿಂದ ಬಿಜೆಪಿ ಕೆಲಸ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ಸಹ ಬಿಜೆಪಿಯತ್ತ ಒಲವು ವ್ಯಕ್ತಪಡಿಸಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಮತ ಸೆಳೆಯಲು ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರು ಮನೆ ಮನೆ ತಲುಪಿ ಮನವಿ ಮಾಡಿದ್ದಾರೆ. ಅಲ್ಲದೇ ಈ ಬಾರಿ ಹಿಂದುತ್ವ ಬಗ್ಗೆ ಹೆಚ್ಚಿನ ಪ್ರಸ್ತಾಪ ಮಾಡದೇ ಇರುವುದರಿಂದ ಬಿಜೆಪಿಗೆ ಅನ್ಯಕೋಮಿನವರು ಮತ ಹಾಕುತ್ತಾರೆ ಎನ್ನುತ್ತಾರೆ ಬಿಜೆಪಿ ಮುಖಂಡರು.
ನಗರದಲ್ಲಿ ಎಲ್ಲ ಜಾತಿ, ಸಮುದಾಯದ ಜನಗಳು ವಾಸವಾಗಿದ್ದು, ಇದರಲ್ಲಿ ಲಿಂಗಾಯತ, ಬ್ರಾಹ್ಮಣ ಹಾಗೂ ಮಸ್ಲಿಮರು ನಿರ್ಣಾಯಕರಾಗಿದ್ದಾರೆ. ಆದರೆ ಬಿಜೆಪಿ ಮಾತ್ರ ನಾವು ಜಾತಿ ಆಧಾರಿತವಾಗಿ ಚುನಾವಣೆ ನಡೆಸುವುದಿಲ್ಲ. ಎಲ್ಲ ಸಮುದಾಯದವರು ನಮಗೆ ಮತ ಹಾಕುತ್ತಾರೆ. ಈ ಬಾರಿ ಯುವ ಸಮದಾಯ ದೊಡ್ಡ ಪ್ರಮಾಣದಲ್ಲಿ ಮೋದಿಯತ್ತ ಆಕರ್ಷಿತರಾಗಿದ್ದು ಗೆದ್ದೇ ಗೆಲ್ಲುತ್ತೀವಿ ಎಂಬ ವಿಶ್ವಾಸದಲ್ಲಿದೆ.
ಉಪ ಚುನಾವಣೆಯಲ್ಲಿ ಜನರ ಬಳಿ ಹೋಗಲು ಆಗಿರಲಿಲ್ಲ. ಆದರೂ ನಮಗೆ 50 ಸಾವಿರ ಮತ ಕೊಟ್ಟಿದ್ದಾರೆ. ಈ ಬಾರಿ ಪ್ರತಿ ಮತದಾರರ ಬಳಿ ಮೂರು ಮೂರು ಬಾರಿ ಹೋಗಿದ್ದೇವೆ. ಮುಸ್ಲಿಮರೇ ಬಹುಸಂಖ್ಯಾತರೇ ಇರುವ ಏರಿಯಾಗಳಲ್ಲಿ ಉಪ ಚುನಾವಣೆಗಿಂತ ಶೇ.30ರಷ್ಟು ಹೆಚ್ಚಿನ ಮತದಾನವಾಗಿದೆ ಅವೆಲ್ಲವೂ ನಮಗೇ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಅಲ್ಲದೇ ಅಲ್ಪಸಂಖ್ಯಾತ ಮುಖಂಡರು ಪ್ರಚಾರ ಮಾಡಿದ್ದು, ಹಿಂದುಳಿದ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಈ ಬಾರಿ ಕೈ ಹಿಡಿಯಲಿದೆ. ಜತೆಗೆ ಕಾಂಗ್ರೆಸ್ ಕಾರ್ಯಕರ್ತರು ಸಹ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಅದು ಸಹ ಕೈ ಹಿಡಿಯುವ ವಿಶ್ವಾಸವಿದೆ ಎನ್ನುತ್ತಾರೆ ಮೈತ್ರಿಕೂಟದ ಮುಖಂಡರು.
•
ಶರತ್ ಭದ್ರಾವತಿ