ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮತದಾರರು ಹೆಚ್ಚಿನ ಉತ್ಸಾಹ ತೋರಿದಂತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನೀರಸವಾಗಿದ್ದರೆ, ದಕ್ಷಿಣ ಕರ್ನಾಟಕ ಉತ್ತಮವಾಗಿದೆ, ಮಧ್ಯ ಕರ್ನಾಟಕದಲ್ಲಿ ಅತ್ಯುತ್ತಮವಾಗಿದೆ. ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ಮತದಾನ ಪ್ರಮಾಣವೇ ಇದಕ್ಕೆ ಸಾಕ್ಷಿ.
ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆದ 14 ಕ್ಷೇತ್ರಗಳ ಚುನಾವಣೆಯಲ್ಲಿ ಶಿವಮೊಗ್ಗ ನಂ. 1 ಸ್ಥಾನ ಅಲಂಕರಿಸಿದೆ. ಈ ಮೂಲಕ ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಸಾರ್ವತ್ರಿಕ ಚುನಾವಣೆಯ ದಾಖಲೆಯನ್ನು ಬ್ರೇಕ್ ಮಾಡಿದೆ. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಶಿವಮೊಗ್ಗದ ಜನರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಆಗ ಮತದಾನದ ಪ್ರಮಾಣ ಶೇ.75ರಷ್ಟಾಗಿತ್ತು. ಈ ದಾಖಲೆಯನ್ನು 67 ವರ್ಷಗಳ ಬಳಿಕ ಹಿಂದಿಕ್ಕಿದೆ. ಇದೇ ಮೊದಲ ಬಾರಿಗೆ ಶೇ. 76.46ರಷ್ಟು ಮತದಾನ ದಾಖಲಾಗುವ ಮೂಲಕ ಇತಿಹಾಸದ ಪುಟ ಸೇರಿದೆ.
ಸ್ವತಂತ್ರ ಭಾರತ ಕಂಡ ಮೊದಲ ಚುನಾವಣೆಯಲ್ಲಿ ದಾಖಲೆ ನಿರ್ಮಿಸಿದ್ದ ಕ್ಷೇತ್ರ, 1975ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಅತಿ ಕಡಿಮೆ ಶೇ.53.89ರಷ್ಟು ಮತದಾನವಾಗುವ ಮೂಲಕ ಅಪವಾದಕ್ಕೆ ಕಾರಣವಾಗಿತ್ತು. ವಿಶೇಷವೆಂದರೆ, ಅದಾದ ಬಳಿಕ 2019ರ ವರೆಗೆ ಅಷ್ಟು ಕಡಿಮೆ ಮತದಾನವಾಗಿಯೇ ಇಲ್ಲ. ನಂತರ ಎದುರಾದ ಎಲ್ಲ ಚುನಾವಣೆಗಳಲ್ಲಿ ಶೇ.75ರೊಳಗೆ ಮತ ಚಲಾವಣೆಯಾಗಿದೆ. ಬಳಿಕ ಈಗಿನ ಸ್ಥಿತಿ ಉತ್ತಮ ಸಂಕೇತ ತೋರಿಸಿದೆ.
ಈ ಬಾರಿಯೂ ಕೈಕೊಟ್ಟ ಸಿಟಿ: ಮತದಾನದಲ್ಲಿ ನಂ.1 ಮಾಡೋಣ ಎಂಬ ಜಿಲ್ಲಾಡಳಿದ ಘೋಷವಾಕ್ಯಕ್ಕೆ ನಗರ ಪ್ರದೇಶಗಳೇ ಹಿನ್ನಡೆ ನೀಡಿವೆ. ಶಿವಮೊಗ್ಗ ನಗರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರೂ ಫಲ ನೀಡಿಲ್ಲ. ಇಲ್ಲಿ 2014(ಸಾರ್ವತ್ರಿಕ), 2018(ಉಪ ಚುನಾವಣೆ)ರಲ್ಲಿ ಕ್ರಮವಾಗಿ 1,50,399 (ಶೇ.64.58) ಮತ್ತು 2,56,062 (ಶೇ.51.45)ಜನ ಮತದಾನ ಮಾಡಿದ್ದರು. ಹೀಗಾಗಿ, ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಸಲ ನಗರದಲ್ಲಿ ಶೇ.67.55ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಗಿಂತ ಉತ್ತಮ ಬೆಳವಣಿಗೆ ಕಂಡು ಬಂದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗಿಲ್ಲ.