Advertisement

ಟ್ರಬಲ್‌ ಶೂಟರ್‌ಗೆ ಸೊಪ್ಪು ಹಾಕದ ಮತದಾರ!

05:37 PM May 24, 2019 | Naveen |

ಶಿವಮೊಗ್ಗ: ಟ್ರಬಲ್‌ ಶೂಟರ್‌, ಕನಕಪುರ ಬಂಡೆ ಖ್ಯಾತಿಯ ಡಿ.ಕೆ. ಬ್ರದರ್ ಶಿವಮೊಗ್ಗ ಅಖಾಡಕ್ಕೆ ಎಂಟ್ರಿ ಕೊಟ್ಟು ಪ್ರಚಾರ ನಡೆಸಿದ್ದು ಕಿಂಚಿತ್ತೂ ಪರಿಣಾಮವಾಗಿಲ್ಲ. ತೀರ್ಥಹಳ್ಳಿ ಹಾಗೂ ಭದ್ರಾವತಿ ಮೇಲೆ ಹೆಚ್ಚಿನ ನಿಗಾ ವಹಿಸಿದ್ದ ಅವರಿಗೆ ಮತದಾರ ಸೊಪ್ಪು ಹಾಕಿಲ್ಲ.

Advertisement

ಭದ್ರಾವತಿಯಲ್ಲಿ 1.20 ಲಕ್ಷ, ತೀರ್ಥಹಳ್ಳಿಯಲ್ಲಿ 40 ಸಾವಿರ ಲೀಡ್‌ ಕೊಡಲೇಬೇಕು ಎಂದು ಕಾರ್ಯಕರ್ತರಿಗೆ ಕಟ್ಟಪ್ಪಣೆ ಮಾಡಿದ್ದರೂ ಬಿಜೆಪಿಯ ಸಂಘಟನಾ ಶಕ್ತಿ, ಮೋದಿ ಅಲೆ ಮುಂದೆ ಡಿ.ಕೆ. ಶಿವಕುಮಾರ್‌ ತಂತ್ರಗಳು ನೀರಲ್ಲಿ ಹೋಮ ಮಾಡಿದಂತಾಗಿದೆ. ಚುನಾವಣೆ ಆರಂಭದಿಂದಲೂ ಡಿ.ಕೆ. ಶಿವಕುಮಾರ್‌ ಬರ್ತಾರೆ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತಿದ್ದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಡಿ.ಕೆ. ಶಿವಕುಮಾರ್‌ ಕ್ಷೇತ್ರಕ್ಕೆ ಆಗಮಿಸುವ ಮೂಲಕ ಬಲ ತುಂಬಿದರು. ಚುನಾವಣೆ ಆರಂಭದಲ್ಲಿ ಎರಡು ದಿನ ಭದ್ರಾವತಿ, ತೀರ್ಥಹಳ್ಳಿಯಲ್ಲಿ ಪ್ರಚಾರ ಮಾಡಿದ ಅವರು, ಈ ಕ್ಷೇತ್ರದಲ್ಲಿದ್ದ ಸಾಮರಸ್ಯ ಕೊರತೆಯನ್ನು ದೂರ ಮಾಡುವ ಪ್ರಯತ್ನ ಮಾಡಿದರು.

ತೀರ್ಥಹಳ್ಳಿಯಲ್ಲಿ ಮೊದಲಿನಿಂದಲೂ ಜಿದ್ದಾಜಿದ್ದಿನಿಂದ ಕೂಡಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡರನ್ನು ಒಂದೇ ವೇದಿಕೆ ಹತ್ತಿಸಿ ಜಂಟಿ ಪ್ರಚಾರ ಮಾಡಿಸಲು ಯಶಸ್ವಿಯಾಗಿದ್ದರು. ಇನ್ನು ಭದ್ರಾವತಿಯಲ್ಲಿ 35 ವರ್ಷದಿಂದ ಹಾವು, ಮುಂಗಸಿಯಂತೆ ಇದ್ದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರರನ್ನು ಮತದಾನದ ಮೂರು ದಿನ ಮೊದಲು ಒಟ್ಟುಗೂಡಿಸಲು ಯಶಸ್ವಿಯಾಗಿದ್ದರು. ಕಳೆದ ಬಾರಿ ಭದ್ರಾವತಿಯಲ್ಲಿ ಜೆಡಿಎಸ್‌ಗೆ 11 ಸಾವಿರ ಮತಗಳ ಲೀಡ್‌ ಬಂದಿತ್ತು. ಆದರೆ ಈ ಬಾರಿ ಬಿಜೆಪಿ ಇಲ್ಲಿ ಮೇಲುಗೆ ಸಾಧಿ ಸಿದೆ. ಬಿಜೆಪಿಗೆ ಅಸ್ತಿತ್ವವೇ ಇಲ್ಲದ ಈ ಕ್ಷೇತ್ರದಲ್ಲಿ ಕನಿಷ್ಠ 1.20 ಲಕ್ಷ ಮತ ಜೆಡಿಎಸ್‌ಗೆ
ಕೊಡಿಸಬೇಕೆಂದು ಡಿಕೆಶಿ ಟಾಸ್ಕ್ ನೀಡಿದ್ದರು. ಮೈತ್ರಿ ತಂತ್ರಕ್ಕೆ ರಣತಂತ್ರ ಹೂಡಿದ್ದ ಬಿಜೆಪಿ ಭದ್ರಾವತಿ ಕ್ಷೇತ್ರಕ್ಕೆ ಅಮಿತ್‌ ಶಾರನ್ನು ಕರೆಸಿ ರೋಡ್‌ ಶೋ ನಡೆಸಿತು. ಆದರೆ ಬಿಜೆಪಿ ಹೊಡೆತಕ್ಕೆ ಡಿಕೆಶಿ ತಂತ್ರ ಠುಸ್‌ ಆಗಿದೆ.

ಇನ್ನು ತೀರ್ಥಹಳ್ಳಿ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಿಮ್ಮನೆ ರತ್ನಾಕರ್‌, ಆರ್‌.ಎಂ. ಮಂಜುನಾಥ ಗೌಡ ಒಂದಾಗಿದ್ದರೂ ತಳಮಟ್ಟದಲ್ಲಿ ಅದು ಸರಿಯಾಗಿರಲಿಲ್ಲ ಎಂಬ ಮಾತುಗಳು ಈಗ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಆರ್‌.ಎಂ. ಮಂಜುನಾಥ ಗೌಡರು ಡಿಸಿಸಿ ಬ್ಯಾಂಕ್‌ ಚುನಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರೂ ಹಾಗಾಗಿ ಹೆಚ್ಚು ಆಸಕ್ತಿಯಿಂದ ಓಡಾಡಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 29 ಸಾವಿರಕ್ಕೂ ಹೆಚ್ಚು ಮತಗಳು ಬಿಜೆಪಿಗೆ ಬಿದ್ದಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಪ್ರಚಾರಕ್ಕೆ ಎರಡು ದಿನ ಬಾಕಿ ಇದ್ದಾಗ ಡಿ.ಕೆ. ಸುರೇಶ್‌ ಬಂದರೂ ಹೆಚ್ಚಿನ ಲಾಭವಾಗಲಿಲ್ಲ. ಜಿಲ್ಲಾ ಮುಖಂಡರು ವೇದಿಕೆ ಹತ್ತಲು ಮಾತ್ರ ಪೈಪೋಟಿ ನಡೆಸಿದ್ದು ಬಿಟ್ಟರೆ ಮತದಾರರ ಮನೆ ಬಾಗಿಲಿಗೆ ಹೋಗದ ಕಾರಣ ಡಿ.ಕೆ. ಬದ್ರರ್ ತಂತ್ರ ಫಲಿಸಲಿಲ್ಲ.

Advertisement

ಶುಭ ಸಮಯದಲ್ಲಿ ಬಂದಿದ್ದೇನೆ ಎಂದಿದ್ರು
ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಕೆ ದಿನ ಹೆಲಿಕಾಪ್ಟರ್‌ ತೊಂದರೆಯಿಂದ ಬಿ.ಎಸ್‌. ಯಡಿಯೂರಪ್ಪ ಹಾಗೂ ಎಸ್‌.ಎಂ. ಕೃಷ್ಣ ಕೂಡ ಬಂದಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ನನ್ನ ಹೆಲಿಕಾಪ್ಟರ್‌ ಯಾವುದೇ ತೊಂದರೆ ಇಲ್ಲದೇ ಬಂದಿದೆ. ಶುಭ ಗಳಿಗೆಯಲ್ಲಿ ಕಾಲಿಟ್ಟಿದ್ದೇನೆ. ಮಧು ಬಂಗಾರಪ್ಪ ಗೆಲುವು ಸಾ ಧಿಸುತ್ತಾರೆ ಎಂದಿದ್ದರು. ಆದರೆ ದೈವವು ಅವರ ಕೈ ಹಿಡಿಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next