ಶಿವಮೊಗ್ಗ: ರಾಜ್ಯ ಸರ್ಕಾರದ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಕೊಂಡೊಯ್ಯುವ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿ ಮಲೆನಾಡಿನ ಜೀವ ಜಲ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದವು.
ಇದೊಂದು ಸರ್ಕಾರದ ಕೆಟ್ಟ ನಿರ್ಧಾರವಾಗಿದೆ. ಬೆಂಗಳೂರಿಗೆ ಕಾವೇರಿ ಸೇರಿದಂತೆ ಹಲವು ನದಿಗಳಿಂದ ಈಗಾಗಲೇ ನೀರು ಕೊಡಲಾಗುತ್ತಿದೆ. ಈಗ ಶರಾವತಿಯ ಮೇಲೆ ಕಣ್ಣು ಬಿದ್ದಿದೆ. ಸಮುದ್ರಕ್ಕೆ ಸೇರುವ ನೀರು ಬಳಸಿಕೊಳ್ಳುತ್ತೇವೆ ಎಂದು ಸುಳ್ಳು ವರದಿ ತಯಾರಿಸಲಾಗುತ್ತಿದೆ. ಈ ಯೋಜನೆ ಜಾರಿಯಾದರೆ ಇಡೀ ಮಲೆನಾಡು ನಾಶವಾಗುತ್ತದೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಕೂಡಲೇ ಸರ್ಕಾರ ಈ ಯೋಜನೆಯನ್ನು ಕೈ ಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಲೆನಾಡು ಸುಸಂಸ್ಕೃತರ ಬಿಡು. ನಾವೆಲ್ಲ ಶಾಂತಿ ಪ್ರಿಯರು. ಆದರೆ ನಮ್ಮ ಪ್ರಶಾಂತ ಮನಸ್ಸುಗಳನ್ನು ಸರ್ಕಾರದ ಕೆಲವು ಅವೈಜ್ಞಾನಿಕ ಚಿಂತನೆಗಳು ಕೆಂಗೆಡಿಸಿವೆ. ಹಲವು ನೂರಾರೂ ಕಿಮೀ ಹರಿಯುತ್ತಿದ್ದ ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಿಸಿ ಸಹಸ್ರಾರು ಜನರ ಬದುಕನ್ನು ಅತಂತ್ರಗೊಳಿಸಿ ಅವರ ಪುನರ್ವಸತಿ ಕೆಲಸ ನಡೆಯುತ್ತಿರುವಾಗಲೇ ಅದೇ ನೀರನ್ನು ಮತ್ತೆ ಬೆಂಗಳೂರಿಗೆ ಹರಿಸಬೇಕು ಎನ್ನುವ ಯೋಜನೆ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಸರ್ಕಾರದ ಕ್ರಮಗಳು ಕಾರ್ಯಗತಗೊಂಡರೆ ಸಾಕಷ್ಟು ಅರಣ್ಯ ನಾಶ ಮತ್ತು ಜನರ ಸ್ಥಳಾಂತರವಂತೂ ಅಡೆತಡೆ ಇಲ್ಲದೆ ನಡೆಯುವ ವಿದ್ಯಮಾನವಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಈ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು. ಇಲ್ಲದಿದ್ದಲ್ಲಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಡಾ| ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಎಸ್.ಬಿ. ಅಶೋಕ್‌ಕುಮಾರ್, ಜಿ.ಎಲ್. ಜನಾರ್ಧನ್, ಕೆ.ಟಿ. ಗಂಗಾಧರಪ್ಪ, ಎಂ. ಗುರುಮೂರ್ತಿ, ಟಿ.ಆರ್. ಅಶ್ವಥ್‌ನಾರಾಯಣ ಶೆಟ್ಟಿ, ಎಂ.ಬಿ. ಕುಮಾರಸ್ವಾಮಿ, ಶೇಖರ್ ಗೌಳೇರ್, ಶಿವಣ್ಣ, ಪಿ. ರುದ್ರೇಶ್, ಗೋ. ರಮೇಶ್ ಗೌಡ, ಕಾಂತೇಶ್ ಕದರಮಂಡಲಿ, ಪರಿಸರ ರಮೇಶ್ ಇನ್ನಿತರರು ಇದ್ದರು.
ದುರ್ಗಿಗುಡಿ ಕನ್ನಡ ಸಂಘ, ಕರ್ನಾಟಕ ತುಂಗಾ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಜಮಾತೆ ಇಸ್ಲಾಮಿ ಹಿಂದ್, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘ, ಡಿಎಸ್‌ಎಸ್, ನವ ಕರ್ನಾಟಕ ನಿರ್ಮಾಣ ವೇದಿಕೆ ಸೇರಿದಂತೆ 20 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.