ಶಿವಮೊಗ್ಗ: ವಿಶ್ವವಿದ್ಯಾಲಯದ ಇಂದಿನ ಸಾಧನೆ ಹಿಂದೆ ಪ್ರಸ್ತುತದ ಎಲ್ಲ ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರ ಸಮರ್ಪಿತ ಶ್ರಮ ಹಾಗೂ ಹಿಂದಿನ ಆಡಳಿತಗಾರರ ದೂರದೃಷ್ಟಿಯ ಕೆಲಸವಿದೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ರೀತಿಯಾದ ರಾಜಕೀಯ, ಇನ್ನಿತರೆ ಹಿತಾಸಕ್ತಿಗಳ ಒತ್ತಡ ಬಂದಿಲ್ಲ. ಇದಕ್ಕಾಗಿ ಎಲ್ಲ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಧನ್ಯವಾದ ಎಂದು ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರೊ| ಜೋಗನ್ ಶಂಕರ್ ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಂಘಗಳ ವತಿಯಿಂದ ಶನಿವಾರ ಸಂಜೆ ಪ್ರೊ| ಎಸ್. ಪಿ. ಹಿರೇಮs್ ಸಭಾಂಗಣದಲ್ಲಿ ಆಯೋಜಿಸಿದ್ದ ತಮ್ಮ (ಪ್ರೊ| ಜೋಗನ್ ಶಂಕರ್ ಅವರ) ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರೂಸಾದಡಿ ಮೂಲ ಸೌಕರ್ಯಗಳು, ಎಲ್ಲ ಸಮಾಜಗಳ ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಪೂರ್ಣ ಸಹಾಯಹಸ್ತ ನೀಡಿದ್ದೇವೆ. ಪರೀಕ್ಷೆ ನಂತರ ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸುವುದು, ಆನ್‌ಲೈನ್ ಪ್ರಮಾಣಪತ್ರಗಳ ವಿತರಣೆ ಸೇರಿದಂತೆ ವಿವಿಧ ವಿದ್ಯಾರ್ಥಿಪರ ಕ್ರಮಗಳನ್ನು ಕೈಗೊಂಡಿದೆ. ವಿದೇಶಿ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ, ಮಾನವಿಕ ವಿಜ್ಞಾನಗಳ ಕಟ್ಟಡ, ಅರಣ್ಯ ಇಲಾಖೆಯಿಂದ ಭೂಮಿ ಪಡೆಯುವ ಪ್ರಕ್ರಿಯೆಗಳು ಸದ್ಯದಲ್ಲಿಯೇ ಯಶಸ್ವಿಯಾಗಿ ಮುಗಿಯಲಿವೆ ಎಂದರು.
ವಿಶ್ವವಿದ್ಯಾಲಯವು ನ್ಯಾಕ್‌ನಿಂದ ‘ಎ’ ಗ್ರೇಡ್ ಪಡೆದಿದ್ದಲ್ಲದೇ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ- ಎನ್‌ಐಆರ್‌ಎಫ್ ರಾಷ್ಟ್ರ ಮಟ್ಟದ ರ್‍ಯಾಂಕಿಂಗ್‌ನಲ್ಲಿ 73ನೇ ಸ್ಥಾನ ಗಳಿಸಿದೆ. ಮುಂದಿನ ದಿನಗಳಲ್ಲಿ ಟಾಪ್ 50 ವಿವಿಗಳ ಪಟ್ಟಿಯಲ್ಲಿ ಹಾಗೂ ನ್ಯಾಕ್‌ನಿಂದ ಎ+ ಪಡೆಯುವತ್ತ ಶ್ರಮ ವಹಿಸಬೇಕು ಎಂದು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಶೇಷ: ಕಾರ್ಯಕ್ರಮದಲ್ಲಿ ಕುಲಪತಿಗಳ ಪತ್ನಿ ಶಶಿಕಲಾ ಅವರು ಮಾತನಾಡಿ, ಕುಲಪತಿಗಳ ಪತ್ನಿಯರು ವಿವಿಗಳಲ್ಲಿ ಲಾಬಿ ಮಾಡುತ್ತಾರೆಂದು ತಿಳಿದು ಹೌಹಾರಿದ್ದೆನು. ಈ ಅಪವಾದದಿಂದ ಹೊರಗುಳಿಯುಲು ನಿರ್ಧರಿಸಿದ್ದೆನು. ನನ್ನ ಪತಿ ಪ್ರೊ| ಜೋಗನ್ ಶಂಕರ್ ಅವರು ಕುವೆಂಪು ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ನಿಯೋಜಿತಗೊಂಡ ನಂತರ ವಿವಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಯತ್ತ ಸಂಪೂರ್ಣ ಗಮನಹರಿಸಲು ಸಹಕಾರ ನೀಡಲು ನಿರ್ಧರಿಸಿದೆ. ನಾನು ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಬೆಂಗಳೂರಿನಲ್ಲಿದ್ದು, ವಿವಿಯ ಹೆಸರನ್ನು ಎತ್ತರಕ್ಕೆ ಒಯ್ಯಬೇಕೆಂಬ ಮಹದಾಸೆಯೊಂದಿಗೆ ವಿವಿಯ ಜವಾಬ್ದಾರಿಯೊಂದಿಗೆ ಅವರನ್ನು ಅಲ್ಲಿರಲು ಅವರಿಗೆ ಬಿಟ್ಟಿದ್ದೆ. ಅದರ ಫಲಿತಾಂಶವಾಗಿ ವಿವಿಯು ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದೆ ಹಾಗೂ ಅದರ ಜೊತೆಗೆ ವಿವಿ ಸಿಬ್ಬಂದಿಯ ಅಪಾರ ಪ್ರೀತಿ ದೊರಕಿರುವುದು ಖುಷಿ ನೀಡಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಹಿರಿಯ ಡೀನ್ ಪ್ರೊ| ಎಸ್.ಎಸ್. ಪಾಟೀಲ್, ಪ್ರಸ್ತುತದ ಕುಲಪತಿಗಳು ವಿಶ್ವವಿದ್ಯಾಲಯವನ್ನು ಮುನ್ನಡೆಸುವ ರೀತಿನೀತಿಗಳ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಸಾಧನೆಯ ಶಿಖರಕ್ಕೆರಿಸಿದ್ದಾರೆ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಈ ಸಂಬಂಧ ನಮಗೆ ನಿರಂತರ ಮಾರ್ಗದರ್ಶನ ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ನುಡಿನಮನ ಅರ್ಪಿಸಿದ ಕುಲಸಚಿವ ಪ್ರೊ| ಭೋಜ್ಯಾನಾಯ್ಕ, ಕುಲಪತಿಗಳು ಸದಾ ನಗುಮೊಗುದೊಂದಿಗೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾ ಯಶಸ್ವಿಯಾಗಿ ಆಡಳಿತ ನಡೆಸಿದ ಸಮರ್ಥ ಆಡಳಿತಗಾರರು. ಸ್ವತಃ ರಾಷ್ಟ್ರಮಟ್ಟದ ಸಂಶೋಧನಾ ತಜ್ಞರಾಗಿರುವ ಅವರು ವಿವಿಯ ವಿಜ್ಞಾನ-ಸಮಾಜ ವಿಜ್ಞಾನ ನಿಕಾಯಗಳ ಸಂಶೋಧನಾ ಚಟುವಟಿಕೆಗಳಿಗೆ ಮಹತ್ವದ ಮಾರ್ಗದರ್ಶನ, ಸಹಕಾರ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಗೆ ಖ್ಯಾತಿ ತಂದುಕೊಟ್ಟರು. ಜಾತಿಧರ್ಮಗಳ ಪಕ್ಷಪಾತ ತೋರದೆ ಕೆಲಸಗಾರರನ್ನು ಗುರುತಿಸಿ ಅವಕಾಶ ನೀಡಿ ನಾಯಕತ್ವ ಗುಣಗಳನ್ನು ಬೆಳೆಸಿದರು ಎಂದರು.
ಕುಲಪತಿ ದಂಪತಿಗಳನ್ನು ವಿಶ್ವವಿದ್ಯಾಲಯದ ಕುವೆಂಪು ವಿವಿ ಅಧ್ಯಾಪಕರ ಸಂಘ ಮತ್ತು ಅಧ್ಯಾಪಕೇತರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿವಿಯ ಹಿರಿಯ ಡೀನ್ ಪ್ರೊ| ಎಸ್.ಎಸ್. ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ| ರಾಜಾನಾಯಕ, ಹಣಕಾಸು ಅಧಿಕಾರಿ ಪ್ರೊ| ಹಿರೇಮಣಿ ನಾಯ್ಕ, ಅಧ್ಯಾಪಕ ಸಂಘದ ಅಧ್ಯಕ್ಷ ಪ್ರೊ| ಬಿರಾದಾರ, ಅಧ್ಯಾಪಕೇತರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ವಿವಿಯ ಎಲ್ಲ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ಮತ್ತು ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.