ಶಿವಮೊಗ್ಗ: ಲಿಂಗ ಸಮಾನತೆ ಎನ್ನುವುದು ಕೇವಲ ಮಾನನಿಯ ಸಮಸ್ಯೆಯಲ್ಲ. ಅದು ಮಾನವೀಯ ಸಮಸ್ಯೆ ಎಂದು ಲೇಖಕ ವಸುಧೇಂದ್ರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಮೋಹನಸ್ವಾಮಿ ಮತ್ತು ಸಲಿಂಗಪ್ರೇಮ’ ಕೃತಿ ವಿಷಯದ ಕುರಿತು ಅವರು ಮಾತನಾಡಿದರು.
ಲೈಂಗಿಕ ಭಿನ್ನತೆಗಾಗಿ ನಾನಾ ರೀತಿಯ ಶೋಷಣೆ ನಡೆಯುತ್ತದೆ. ಅದೇ ರೀತಿ ಲಿಂಗ ಭಿನ್ನತೆಗಾಗಿಯೂ ಶೋಷಣೆ ನಡೆಯುತ್ತದೆ. ಲೈಂಗಿಕತೆಯ ಭಿನ್ನ- ಭಿನ್ನ ಆಯಾಮಗಳು ಸಾಕಷ್ಟಿವೆ. ಇದು ಎಲ್ಲ ಕಾಲಕ್ಕೂ ಇತ್ತು. ಇಂದೂ ಇದೆ. ಮುಂದೆಯೂ ಇರಲಿದೆ. ಲಿಂಗ ಸಮಾನತೆ ಎನ್ನುವುದು ಅನುಕಂಪವಲ್ಲ. ನಮ್ಮನ್ನು ನಾವು ಗೌರವಿಸುವ ಒಂದು ಮನೋಭಾವ ಎಂದು ಹೇಳಿದರು.
ಸಮಾಜದಲ್ಲಿ ಬಹುತೇಕರು ಸಲಿಂಗ ಪ್ರೇಮವನ್ನು ವ್ಯಾಧಿ ಎಂದು ಪರಿಗಣಿಸಿದ್ದಾರೆ. ಇನ್ನೂ ಕೆಲವರು ಇದು ಬೇರೆ ದೇಶದಿಂದ ಬಂದಿದೆ ಎಂದು ಭಾವಿಸಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಇದೊಂದು ಫೋಬಿಯಾ ಎಂದು ಪರಿಗಣಿಸಲಾಗಿದೆ. ಆದರೆ ಇವೆಲ್ಲವೂ ಸುಳ್ಳು. ಇದು ಹುಟ್ಟಿನಿಂದ ಬರುವ ಸ್ವಭಾವವೇ ಹೊರತು, ಇನ್ನೊಬ್ಬರಿಂದ ಬರುವಂಥದ್ದಲ್ಲ. ಆದರೆ, ಇಂಗ್ಲಿಷ್ ಹೊರತುಪಡಿಸಿ ಕನ್ನಡ ಸೇರಿದ ದೇಶೀಯ ಭಾಷೆಯಲ್ಲಿ ಈ ಬಗ್ಗೆ ತಿಳಿ ಹೇಳುವ ಸಾಹಿತ್ಯ, ಮನಸ್ಥಿತಿ ಬಂದಿಲ್ಲ ಎಂದರು.
ಸಾಹಿತ್ಯ ಲೋಕದಲ್ಲಿ ಒಂದು ಕೃತಿಯು ಉತ್ತಮ ಹೆಸರು, ಹಣ, ಗೌರವ ತಂದುಕೊಡಬಹುದು. ಆದರೆ, ಒಂದು ಕೃತಿ ತನ್ನ ಬದುಕನ್ನು ಹಿಂದಿರುಗಿಸಿಕೊಡುವ ಸಂದರ್ಭ ಅತೀ ವಿರಳ. ಆದರೆ, ಮೋಹನಸ್ವಾಮಿ ಮತ್ತು ಸಲಿಂಗಪ್ರೇಮ ಕೃತಿಯೂ ತಮಗೆ ಬದುಕನ್ನು ಹಿಂದಿರುಗಿಸಿ ಕೊಟ್ಟಿದೆ. ಸಮಾಜದಲ್ಲಿ ಭಿನ್ನ ಲೈಂಗಿಕತೆಯ ಬಗ್ಗೆ ತಾಳಿರುವ ನಿಲುವುಗಳನ್ನು ಈ ಕೃತಿಯ ವಿಶ್ಲೇಷಣೆಯಿಂದ ಮನವರಿಕೆಯಾಗಿದೆ. ಅಲ್ಲದೇ, ಈ ಕೃತಿಯ ಮೂಲಕ ತಾವು ಮಲಯಾಳಂ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್, ಸ್ಪ್ಯಾನಿಷ್ ಓದುಗರನ್ನು ತಲುಪಲು ಸಾಧ್ಯವಾಗಿದೆ ಎಂದು ಹೇಳಿದರು.
ಸಂತೋಷದಿಂದ ಇರುವ ಎಲ್ಲಾ ಮನಸ್ಸುಗಳು ಸುಂದರವಾಗಿ ಕಾಣುತ್ತವೆ. ಹಾಗಾಗಿ ನಾವು ಇರುವುದೇ ಹೀಗೆ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆದ ನಂತರ ನಮ್ಮಲ್ಲಿರುವ ಭಯ ದೂರವಾಗುತ್ತದೆ. ಅನಂತರ ನಮ್ಮಲ್ಲಿರುವ ವಿಭಿನ್ನತೆಯನ್ನು ದೈಹಿಕ ದೋಷ ಎಂದು ಪರಿಗಣಿಸುವುದಕ್ಕೆ ಬೇಸರ ಎನಿಸುತ್ತದೆ ಎಂದರು.
ವಸುದೇಂದ್ರ ಅವರೊಂದಿಗೆ ಸಂವಾದ ನಡೆಯಿತು. ಕರ್ನಾಟಕ ಸಂಘದ ಉಪಾಧ್ಯಕ್ಷ ಎಚ್.ಡಿ. ಉದಯಶಂಕರ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ| ಎಚ್.ಎಸ್. ನಾಗಭೂಷಣ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಮಂಜುಳಾ ಇದ್ದರು.