Advertisement

ಕುಸಿಯುತ್ತಿದೆ ನೈತಿಕ ಮೌಲ್ಯ: ಬಿ.ಎಲ್‌. ಶಂಕರ್‌

04:35 PM Nov 25, 2019 | Naveen |

ಶಿವಮೊಗ್ಗ: “ಪ್ರಸ್ತುತ ಸನ್ನಿವೇಶದಲ್ಲಿ ಯಾವ ಪಕ್ಷಗಳಲ್ಲೂ ಮಾದರಿ ನಾಯಕರು ಕಾಣುತ್ತಿಲ್ಲ. ರಾಜಕಾರಣ, ಮಾಧ್ಯಮ, ಸಮಾಜದಲ್ಲೂ ನೈತಿಕ ಮೌಲ್ಯಗಳು ಕುಸಿದಿವೆ’ ಎಂದು ಹಿರಿಯ ರಾಜಕಾರಣಿ ಬಿ.ಎಲ್‌. ಶಂಕರ್‌ ಆತಂಕ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಸಂಘ ಶನಿವಾರ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ “ನನ್ನ ಕಲ್ಪನೆಯ ರಾಜಕೀಯ ಪ್ರಾತಿನಿಧ್ಯ’ ವಿಷಯ ಕುರಿತು ಅವರು ಮಾತನಾಡಿದರು. “ರಾಜಕಾರಣದಲ್ಲಿ ಇಂದು ಜಾತಿ ಭೂತ ವಿಜೃಂಭಿಸುತ್ತಿದೆ. ಹಣಕ್ಕೆ ಮಹತ್ವ ನೀಡಲಾಗುತ್ತಿದೆ. ಟಿಕೆಟ್‌, ಕ್ಯಾಬಿನೆಟ್‌ ಪ್ರಾತಿನಿಧ್ಯವೂ ಜಾತಿ ಆಧಾರದಲ್ಲೇ ನಿರ್ಧರಿತವಾಗುತ್ತಿದೆ. ಒಂದು ಜಾತಿಯ ಮುಖಂಡನಿಗೆ ರಾಜಕೀಯ ಪ್ರಾತಿನಿಧ್ಯ ದೊರೆತರೆ ಲಾಭವಾಗುವುದು ಎರಡು ಗುಂಪುಗಳಿಗೆ. ಒಂದು ಆ ವ್ಯಕ್ತಿಯ ಕುಟುಂಬಕ್ಕೆ, ಮೊತ್ತೂಂದು ಅವರ ಜಾತಿಯ ಭ್ರಷ್ಟ ಅಧಿಕಾರಿಗಳಿಗೆ. ಆಯಕಟ್ಟಿನ ಸ್ಥಾನ ಅವರಿಗೆ ಬಳುವಳಿ’ ಎಂದು ವಿಶ್ಲೇಷಿಸಿದರು.

“ಜನಪ್ರತಿನಿಧಿಗಳಲ್ಲೂ ಮೌಲ್ಯಗಳು ಕುಸಿದಿವೆ. ಶಾಸನಸಭೆಯಲ್ಲೇ ಏಕ ವಚನ ಬಳಕೆ, ಬಟ್ಟೆ ಹರಿದುಕೊಳ್ಳುವುದು, ಹೊಡೆದಾಡುವುದು. ಅಸಹ್ಯಕರವಾಗಿ ನಡೆದುಕೊಳ್ಳುವ ಪರಿಪಾಠ ಬೆಳೆದಿದೆ. ಅವರನ್ನು ಎಚ್ಚರಿಸಬೇಕಾದ ಮಾಧ್ಯಮಗಳೂ ಹಾದಿ ತಪ್ಪಿವೆ. ಸಾಮಾಜಿಕ ಮೌಲ್ಯಗಳಿಗಿಂತ ಟಿಆರ್‌ಪಿ ಮಹತ್ವ ಪಡೆದಿದೆ. ಹಿಂಸೆ, ಜಗಳ, ರಾಜಕಾರಣದ ಕೆಸರೆರೆಚಾಟ, ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವ ಮಾಧ್ಯಮಗಳು ನವಿರು ಕಾರ್ಯಕ್ರಮಗಳಿಗೆ ತಿಲಾಂಜಲಿ ನೀಡಿವೆ. ಸಾವಿನ ಸುದ್ದಿಗಳ ಪ್ರಸಾರದಲ್ಲೂ ತಾರತಮ್ಯ ಮಾಡುತ್ತವೆ’ ಎಂದು ಟೀಕಿಸಿದರು.

“ಸ್ವಾತಂತ್ರ್ಯ ಚಳವಳಿಯ ಜತೆಗೇ ಬೆಳೆದು ಬಂದ ನಮ್ಮ ಸಂಸದೀಯ ಪರಂಪರೆ ಒಂದು ಕಾಲದಲ್ಲಿ ಜಗತ್ತಿಗೇ ಮಾದರಿಯಾಗಿತ್ತು. ಗಾಂಧೀಜಿ ಮಾನವೀಯತೆ ಪ್ರತಿನಿಧಿಸುವ ವಿಶ್ವನಾಯಕರಾಗಿ ಬೆಳೆದರು. ಚೀನಾದಂತಹ ಭಾರತ ವಿರೋಧಿ ದೇಶದಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯವರೆಗೆ ಗಾಂಧಿ ಚರಿತ್ರೆಯ ಪಠ್ಯಗಳನ್ನು ಅಳವಡಿಸಲಾಗಿದೆ. ಪ್ರಪಂಚದ 260 ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳಿವೆ. ವಿಶ್ವದ ಎಲ್ಲ ಭಾಷೆಗಳಲ್ಲೂ ಅವರ ಕುರಿತು ಬರಹಗಳು ಪ್ರಕಟಗೊಂಡಿವೆ. ಅಂತಹ ನಾಯಕರ ಪರಂಪರೆ ದೇಶಕ್ಕೆ ಘನತೆ ತಂದುಕೊಟ್ಟಿದೆ’ ಎಂದು ಬಣ್ಣಿಸಿದರು.

ಸ್ವಾತಂತ್ರ್ಯಾ ನಂತರ ನೆಹರು, ರಾಮಮನೋಹರ ಲೋಹಿಯಾ, ಜಯಪ್ರಕಾಶ್‌ ನಾರಾಯಣ್‌ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದರು. ನೆಹರೂ ಅವರಿಗೆ ಸಂಸತ್‌ ನಲ್ಲಿ ಭಾರೀ ಬಹುಮತವಿದ್ದರೂ ವಿರೋಧ ಪಕ್ಷದ ನಾಯಕರ ಮಾತಿಗೆ ಮನ್ನಣೆ ನೀಡುತ್ತಿದ್ದರು. ವಾಜಪೇಯಿ ಅವರನ್ನು ಮುಂದಿನ ಪ್ರಧಾನಿ ಎಂದು ಬಣ್ಣಿಸಿದ್ದರು. ಅಳಿಯ ಫಿರೋಜ್‌ ಗಾಂಧಿ  ಖಾಸಗಿ ವಿಮಾ ಕಂಪನಿಗಳ ಭ್ರಷ್ಟಾಚಾರ ಬಯಲಿಗೆ ಎಳೆದರು. ಅವರು ಮಂಡಿಸಿದ ವಿಮಾ ಕಂಪನಿಗಳ ರಾಷ್ಟ್ರೀಕರಣ ಮಸೂದೆಗೆ ನೆಹರೂ ಅಂಗೀಕಾರ ನೀಡಿದರು ಎಂದು ಇತಿಹಾಸ ಮೆಲುಕು ಹಾಕಿದರು.

Advertisement

ಮುಂದೆ ವಾಯಪೇಯಿ, ಮನಮೋಹನ್‌ ಸಿಂಗ್‌ ಸರಳತೆ, ಪಾರದರ್ಶಕತೆಗೆ ಮಾದರಿಯಾಗಿದ್ದರು. ವಿರೋಧ ಪಕ್ಷಗಳನ್ನು ವಾಜಪೇಯಿ ಎಂದೂ ಕಡೆಗಣಿಸಲಿಲ್ಲ. ಮನಮೋಹನ್‌ ಸಿಂಗ್‌ ರಾಜಕೀಯ ನಿರ್ಧಾರಗಳ ಕುರಿತು ಟೀಕೆಗಳಿದ್ದರೂ, ಆರ್ಥಿಕ ಚಿಂತಕರಾಗಿ ಅವರು ಭಾರತದ ಆರ್ಥಿಕತೆ ತಮ್ಮದೇ ಕೊಡುಗೆ ನೀಡಿದರು.

ಇಂದು ಅಂತಹ ಪರಂಪರೆ ನಾಶವಾಗುತ್ತಿದೆ. ವಿರೋಧ ಪಕ್ಷಗಳ ಅಗತ್ಯವೇ ಇಲ್ಲ ಎಂಬಂತೆ ನಡೆದುಕೊಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷ ಕೆ. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್‌.ಎಸ್‌. ನಾಗಭೂಷಣ, ಡಾ| ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next