ಶಿವಮೊಗ್ಗ: ಕೇವಲ ಡಾಕ್ಟರ್, ಇಂಜಿನಿಯರ್ ಆಗುವ ಕನಸು ಕಾಣದೇ ದೇಶಸೇವೆ ಮಾಡುವಲ್ಲಿ ಕೂಡ ನಾವು ಆಸಕ್ತಿ ತಾಳಬೇಕು. ನಮ್ಮಲ್ಲಿ ಕೇವಲ ಕೆಲವು ಪ್ರಾದೇಶಿಕ ಜನತೆ ಮಾತ್ರ ಸೈನ್ಯ ಸೇರುವ ಆಶಯ ರೂಢಿಸಿಕೊಂಡಿದ್ದಾರೆ. ಹಾಗಾಗದೇ ದೇಶದ ಎಲ್ಲೆಡೆಯ ಜನತೆಯೂ ಈ ಬಗ್ಗೆ ಮುಂದಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎಂ. ಅಶ್ವಿನಿ ಕರೆ ನೀಡಿದರು.
ಅವರು ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ‘ಕಾರ್ಗಿಲ್ ವಿಜಯ ದಿವಸ್’ ಆಚರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಸಮಯಕ್ಕೆ ಬಹಳ ಮಹತ್ವ ನೀಡಬೇಕು. ಕಳೆದ ಕಾಲ ಮತ್ತೆ ಬರುವುದಿಲ್ಲ. ಮುಂದೆ ಭವಿಷ್ಯದಲ್ಲಿ ತಾನೇನಾಗಬೇಕು ಎಂಬುದನ್ನ ನಿರ್ಧರಿಸಬೇಕು. ಸಮಾಜದಲ್ಲಿ ಯಾವುದೇ ವೃತ್ತಿಯಾಗಲೀ ಕೇವಲ ತಾನು ಮಾತ್ರ ಬದುಕಬೇಕೆಂಬುದಲ್ಲ. ಸಮಾಜಕ್ಕೆ ತಾನೇನು ಕೊಡುಗೆಯನ್ನ ನೀಡಬಲ್ಲೆ ಎಂಬ ಬಗ್ಗೆ ವಿವೇಚಿಸಬೇಕು. ವೃತ್ತಿಯಾರಂಭಿಸಿದಾಗ ಸಂಗಡವೇ ಸಾಮಾಜಿಕ ಹೊಣೆಯೂ ನಮ್ಮದಾಗುತ್ತದೆ.ಅದೇ ದೇಶಸೇವೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನುಡಿದರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ| ಧನಂಜಯ ಮಾತನಾಡಿ, ಸೈನಿಕರ ದೇಶಸೇವೆಯ ಫಲವಾಗಿ ನಾವೆಲ್ಲರೂ ಇಂದು ನಮ್ಮ ಬಾಳನ್ನು ನೆಮ್ಮದಿಯಿಂದ ಸಾಗಿಸುತ್ತಿದ್ದೇವೆ. ನಿಜಕ್ಕೂ ಯುದ್ಧದಲ್ಲಿ ಹೊರಾಡುವ ಯೋಧರ ಜೀವನ ತ್ಯಾಗಮಯ. ನಮ್ಮ ಯುವಜನ ಯೋಧರ ಸೇವೆಯನ್ನ ಸ್ಮರಿಸಬೇಕು. ಸಮಾಜದಲ್ಲಿ ವಿವಿಧ ಉನ್ನತ ಹುದ್ದೆಗಳನ್ನ ನಿರ್ವಹಿಸುವ ಮೂಲಕ ದೇಶೋಪಕಾರಿಯಾದ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು.
ಮಾಜಿ ಯೋಧರಾದ ಸರ್ವಶ್ರೀ ಮಾಲತೇಶ್, ಹನುಮಂತಪ್ಪ, ಸ್ಟ್ಯಾನ್ಲೀ ಮುಂತಾದವರನ್ನು ಕಾರ್ಗಿಲ್ ವಿಜಯೋತ್ಸವ ದಿವಸ್‌ನ ನಿಮಿತ್ತ ಆದರ ಪೂರ್ವಕವಾಗಿ ಸನ್ಮಾನಿಸಲಾಯಿತು. ಕರ್ನಲ್ ಕೆ.ಎ.ರಾಮಚಂದ್ರ ಅವರು ರಾಷ್ಟ್ರರಕ್ಷಣೆಯಲ್ಲಿ ‘ಯುವಜನರ ಪಾತ್ರ’ ವಿಷಯ ಕುರಿತು ವಿಡಿಯೋ ಕ್ಲಿಪಿಂಗ್ ಆಧರಿತ ಉಪನ್ಯಾಸ ನೀಡಿ, ಅವಿಭಜಿತ ಭಾರತದ ಪರಿಸ್ಥಿತಿ ಮತ್ತು ಸ್ವಾತಂತ್ರ್ಯಾ ನಂತರ ಭಾರತದ ಸಮಗ್ರ ಸೇನಾ ವ್ಯವಸ್ಥೆ, ಯೋಧರು ಸಮರ ಸನ್ನಿವೇಶದಲ್ಲಿ ಎದುರಿಸುವ ಸವಾಲುಗಳನ್ನ ರೋಮಾಂಚನಕಾರಿಯಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಯುವ ರೆಡ್‌ಕ್ರಾಸ್ ವಿಭಾಗದ ಉದ್ಘಾಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಭಾವಗಾನ ತಂಡದ ಸದಸ್ಯರು ಸುಶ್ರಾವ್ಯ ದೇಶಭಕ್ತಿಗೀತೆಗಳ ಗಾಯನ ಪ್ರಸ್ತುತಪಡಿಸಿದರು. ರಂಗಕರ್ಮಿ ಕಾಂತೇಶ್ ಕದರಮಂಡಗಿ ಕಾರ್ಯಕ್ರಮ ನಿರೂಪಿಸಿದರು. ವಿಶ್ರಾಂತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಕಾಲೇಜಿನ ರೆಡ್‌ಕ್ರಾಸ್ ವಿಭಾಗದ ಅಧಿಕಾರಿ ಫ್ರೂ| ಮಂಜುನಾಥ್ ವಂದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನೌಕರರ ಸಂಘದ ಅಧ್ಯಕ್ಷ ಪಿ.ಒ.ಶಿವಕುಮಾರ್ ವಹಿಸಿದ್ದರು.