Advertisement

ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

04:46 PM Jul 19, 2019 | Naveen |

ಶಿವಮೊಗ್ಗ: ನಗರದಲ್ಲಿ ಗಾಂಜಾ, ಡ್ರಗ್ಸ್‌ ಇನ್ನಿತರೆ ಮಾದಕ ವಸ್ತುಗಳ ಮಾರಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಜೈ ಭೀಮ್‌ ಕನ್ನಡ ಸೈನ್ಯ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿರುವ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗದ ಪ್ರತಿಷ್ಠಿತ ಕಾಲೇಜುಗಳಲ್ಲಿ ದಿನೇ ದಿನೇ ಮಾದಕ ವಸ್ತುಗಳ ಮಾರಾಟ ಹಾಗೂ ಸರಬರಾಜು ಹೆಚ್ಚಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹೊರ ರಾಜ್ಯಗಳಿಂದ ಬಂದಿರುವ ಕಾಲೇಜು ವಿದ್ಯಾರ್ಥಿಗಳು ಮಧ್ಯವರ್ತಿಗಳ ಮೂಲಕ ಗಾಂಜಾ ಮಾರಾಟದಲ್ಲಿ ಭಾಗಿಯಾಗಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಮಾದಕ ವ್ಯಸನ ಹೆಚ್ಚುತ್ತಿರುವುದರಿಂದ ಪೋಷಕರು ಕಂಗಾಲಾಗಿದ್ದು ಅವರಿಗೆ ದಿಕ್ಕು ತೋಚದಂತಾಗಿದೆ. ಪೊಲೀಸ್‌ ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಮಾದಕ ವ್ಯಸನಿಗಳಾಗಿರುವ ಕೆಲವು ವಿದ್ಯಾರ್ಥಿಗಳು ಪುಂಡ ಪೋಕರಿಗಳಂತೆ ಕಾಲೇಜು ಆವರಣದಲ್ಲಿ ವರ್ತಿಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ಮೀಟಿಂಗ್‌ ಮಾಡುವುದು, ಗಾಂಜಾ ಸೇವನೆ ಮಾಡುವುದರಿಂದ ಅಪರಾಧ ಕೃತ್ಯಗಳು ಹೆಚ್ಚಾಗತೊಡಗಿವೆ. ಮಾದಕ ವ್ಯಸನಿಗಳಿಂದ ಅಪರಾಧ ಚಟುವಟಿಕೆ ಹೆಚ್ಚಾಗಲಿದ್ದು, ಈ ಬಗ್ಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಇತ್ತೀಚಿಗೆ ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ, ಇರಲು ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

Advertisement

ಜಾಗೃತಿ ಕಾರ್ಯಕ್ರಮ ಮೂಡಿಸಬೇಕು. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಪ್ರಮುಖರಾದ ಎಸ್‌.ಎಸ್‌. ಮಂಜುನಾಥ್‌, ಎಂ.ಪಿ. ವೆಂಕಟೇಶ್‌, ಭರತ್‌ ಕುಮಾರ್‌, ಅರುಣ್‌ ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next