Advertisement

ಸಾಧಕರೇ ಗುರು: ಸೂಲಿಬೆಲೆ

12:09 PM Jul 20, 2019 | Team Udayavani |

ಶಿವಮೊಗ್ಗ: ನಾವು ಸಾಗಬೇಕೆನ್ನುವ ಹಾದಿಯಲ್ಲಿ ನಮಗಿಂತ ಮೊದಲೇ ನಡೆದು ಸಾಧನೆ ಮಾಡಿದವರು ಗುರು, ಮಾರ್ಗದರ್ಶಕ ಎನಿಸಿಕೊಳ್ಳುತ್ತಾರೆ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀಧರ ಸೇವಾ ಸಮಿತಿ ಮತ್ತು ಸಂಸ್ಕಾರ ಭಾರತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಗುರು ಎನ್ನುವುದು ತಾನು ಹೇರಿಕೊಂಡಿರುವ ಪದವಿಯಲ್ಲ, ಅದೊಂದು ಯೋಗ್ಯತೆ ಎಂದರು.

ಒಬ್ಬ ಗುರು ತನ್ನ ಎದುರಿಗಿರುವ ವ್ಯಕ್ತಿಯ ಪೂರ್ವಾಪರ ಅರಿತು ಮಾರ್ಗದರ್ಶನ ಮಾಡುತ್ತಾನೆ. ಅದಕ್ಕಾಗಿ ಗುರುವಿನ ಸಾಕ್ಷಾತ್ಕಾರವಾಗಬೇಕೆಂದರೆ ಗುರುವಿಗೆ ನಮ್ಮ ಸರ್ವಸ್ವವನ್ನು ಒಪ್ಪಿಸಬೇಕು. ಅದಕ್ಕಾಗಿಯೇ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಪುರಂದರದಾಸರು ಹೇಳಿದ್ದರು. ಗುರು ಎಷ್ಟು ಕಾರುಣ್ಯವುಳ್ಳವನಾಗಿರುತ್ತಾನೆ ಎಂದರೆ ಶಿಷ್ಯನ ತಪ್ಪನ್ನು ಮನ್ನಿಸುತ್ತಲೇ ಇರುತ್ತಾನೆ ಎಂದರು.

ಒಬ್ಬ ಶಿಷ್ಯ ತನ್ನ ಜ್ಞಾನಾರ್ಜನೆಗಾಗಿ ಸಮರ್ಥ ಗುರುವನ್ನು ಹುಡುಕುವಂತೆ ಗುರು ಸಹ ಸಮರ್ಥನಾದ ಶಿಷ್ಯನ ಹುಡುಕಾಟದಲ್ಲಿ ಇರುತ್ತಾನೆ. ಏಕೆಂದರೆ ಜೀವನದ ಉದ್ದಕ್ಕೂ ತಾನು ಗಳಿಸಿದ ಶ್ರೇಷ್ಠವಾದ ಪರಮ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಲ್ಲಿರುತ್ತಾನೆ. ಅದಕ್ಕಾಗಿ ಯಾರ ಮೂಲಕ ತಲುಪಿಸಬಹುದು, ಯಾರನ್ನು ಶಿಷ್ಯನನ್ನಾಗಿ ಮಾಡಿಕೊಂಡಲ್ಲಿ ತನ್ನ ಉದ್ದೇಶ ಈಡೇರುತ್ತದೆ ಎಂದು ಸಮರ್ಥ ಶಿಷ್ಯನಿಗಾಗಿ ಹುಡುಕಾಟದಲ್ಲಿರುತ್ತಾನೆ ಎಂದರು.

ಉಪನಿಷತ್‌ ಪ್ರಕಾರ ಪ್ರತಿಯೊಬ್ಬರೂ ಜೀವನದಲ್ಲಿ ಐದು ಯಜ್ಞಗಳನ್ನು ಪಾಲಿಸಬೇಕು. ಅವುಗಳೆಂದರೆ ದೇವ ಯಜ್ಞ, ಋಷಿ ಯಜ್ಞ, ಪಿತೃ ಯಜ್ಞ, ಮನುಷ್ಯ ಯಜ್ಞ ಹಾಗೂ ಭೂತ ಯಜ್ಞ. ನಾವು ದೇವ ಯಜ್ಞವನ್ನು ಮಾಡುತ್ತೇವೆಯಾದರೂ ಯಾವುದೋ ಒಂದು ಬೇಡಿಕೆಯನ್ನು ದೇವರ ಮುಂದೆ ಇಡುತ್ತೇವೆ. ಅದರ ಬದಲು ನಿರ್ಮಲವಾದ ಭಕ್ತಿ ನಮ್ಮದಾಗಬೇಕು ಎಂದರು. ನಮಗಿಂತಲೂ ಕೆಳ ಸ್ತರದಲ್ಲಿರುವ ವ್ಯಕ್ತಿಗಳನ್ನು ನೋಡಿದಾಗ ನಾವು ದೇವರ ಮುಂದೆ ಯಾವುದಾದರೂ ಬೇಡಿಕೆಯನ್ನಿಸಿರುವ ಪ್ರಮೇಯವೇ ಬರುವುದಿಲ್ಲ. ಆಗ ಆಸೆ ಹಾಗೂ ದುಃಖಗಳೂ ಇರುವುದಿಲ್ಲ. ಋಷಿ ಯಜ್ಞ ಪಾಲನೆ ಜತೆಗೆ ಪಿತೃ ಯಜ್ಞದ ಔಚಿತ್ಯವನ್ನು ನಮ್ಮ ಮಕ್ಕಳಿಗೆ ತಿಳಿಸದೇ ಹೋದರೆ ಮುಂದೆ ನಾವು ತುಂಬಾ ಕಷ್ಟಪಡಬೇಕಾಗುತ್ತದೆ. ನಾವು ಏನನ್ನೂ ಮಾಡದೇ ನಮ್ಮ ಪಾಲಕರನ್ನು ಸರಿಯಾಗಿ ನೋಡಿಕೊಳ್ಳದೆ ನಮ್ಮ ಮಗ ಮಾತ್ರ ಮುಂದೆ ನಮ್ಮನ್ನು ಸುಖವಾಗಿ ನೋಡಿಕೊಳ್ಳಬೇಕೆಂದು ಬಯಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಮ್ಮ ಜೀವನದಲ್ಲಿ ನಾಲ್ಕು ಜನರಿಗಾದರೂ ನಾವು ಅನ್ನ ಹಾಕಬೇಕು. ಅದರ ಜತೆಗೆ ನೆಲ, ನೀರು, ಕಾಡು ಮುಂತಾದ ಪಂಚಭೂತಗಳನ್ನು ಪ್ರೀತಿಸಿ ಸಂರಕ್ಷಿಸಬೇಕು ಎಂದರು. ಇದಕ್ಕೂ ಮೊದಲು ಶ್ರೀ ಶಾರದಾ ಸಂಗೀತ ವಿದ್ಯಾಲಯದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಜನಾ ಗಾಯನ ನಡೆಸಿಕೊಟ್ಟರು. ಗುರುಗುಹ ಸಂಗೀತ ಮಹಾವಿದ್ಯಾಲಯದ ಶೃಂಗೇರಿ ಎಚ್.ಎಸ್‌.ನಾಗರಾಜ್‌ಗೆ ಗುರುನಮನ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next