Advertisement

ಸಾಧಕರಿಗೆ ಪ್ರೋತ್ಸಾಹ ಅನುಕರಣೀಯ

12:22 PM Aug 29, 2019 | Naveen |

ಶಿವಮೊಗ್ಗ: ಸಮಾಜದ ಸಾಧಕರನ್ನು ಗುರುತಿಸುವ, ಅವರನ್ನು ಪ್ರೋತ್ಸಾಹಿಸುವ ವಿಪ್ರ ನೌಕರರ ಸಂಘದ ಪ್ರಯತ್ನ ಅನುಕರಣೀಯವಾದುದು. ಸಮಾಜದ ಹಿರಿಯರ ಬದುಕು, ವಿಚಾರ ನಮಗೆ ಮಾರ್ಗ ದರ್ಶನವಾಗಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ತಿಳಿಸಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಏರ್ಪಡಿಸಿದ್ದ .ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ ಹಾಗೂ ಸಂಘದ ಹಿರಿಯ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಬ್ರಾಹ್ಮಣ ಸಂಘದಿಂದ ವಿಪ್ರ ಸಮಾಜದ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಮಂಜೂರಾಗಿದೆ. ಈ ಕಾರ್ಯದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘವೂ ಕೈ ಜೋಡಿಸಬೇಕು. ಹಾಸ್ಟೆಲ್ನಿಂದ ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದರು.

ಕಟೀಲು ಅಶೋಕ್‌ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲೆ ಡಾ| ಸಂಧ್ಯಾ ಕಾವೇರಿ ಮಾತನಾಡಿ, ಯಶಸ್ವಿ ಜೀವನಕ್ಕೆ ಸಾಮಾಜಿಕ ಬುದ್ಧಿವಂತಿಕೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆ ಅತಿ ಮುಖ್ಯ ಎಂದು ಹೇಳಿದರು.

ಹದಿಹರೆಯದ ಇಂದಿನ ಮಕ್ಕಳಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೆ. ಸಣ್ಣ ಮಾತಿಗೂ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಜೀವನ ಕೌಶಲಗಳ ಕೊರತೆಯ ಕೊರತೆಯೇ ಇದಕ್ಕೆ ಮೂಲ ಕಾರಣ. ಹಾಗಾಗಿ ಸಾಮಾಜಿಕ ಜವಾಬ್ದಾರಿಯುಳ್ಳ ಹಿರಿಯರು, ಪೋಷಕರು ಇಂದಿನ ಓಡುವ ಜಗತ್ತಿನಲ್ಲಿ ಮಕ್ಕಳನ್ನು ಹೇಗೆ ರೂಪಿಸಬೇಕು? ವೈಜ್ಞಾನಿಕ ಮನೋಭಾವ ಹೇಗೆ ಬೆಳೆಸಬೇಕು ಎಂಬುದನ್ನು ಚಿಂತಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರು ಹಾಗೂ ಸಂಘದ ಜಿಲ್ಲಾ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಯುವ ಸಮುದಾಯಕ್ಕೆ ಇಂದು ಹಣ ಅಂತಸ್ತು ಮುಖ್ಯವಾಗಿದೆ. ಎಲ್ಲರೂ ಹಣ ಗಳಿಸುವುದರ ಹಿಂದೆ ಬಿದ್ದಿದ್ದಾರೆ. ಜನಪ್ರಿಯತೆ ಹಾಗೂ ಕೀರ್ತಿ ಸಂಪಾದಿಸಬೇಕೆಂದು ವಿವೇಚನೆಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಮೌಲ್ಯಗಳು ಕಡಿಮೆಯಾಗುತ್ತಿವೆ. ಸಂಬಂಧಗಳು ಹಾಳಾಗುತ್ತಿವೆ. ರಕ್ತ ಸಂಬಂಧ, ದಾಯಾದಿ ಸಂಬಂಧಗಳ ಪರಿಚಯವೇ ಮಕ್ಕಳಿಗೆ ಇಲ್ಲವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಗಳನ್ನು ಹೇಳಿಕೊಡಬೇಕು ಎಂದರು.

Advertisement

ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯ ಹಲವು ವರ್ಷಗಳನ್ನು ಕೇವಲ ದುಡಿಮೆಗೆಂದೇ ಮೀಸಲಿಡುತ್ತಾರೆ. ಇಲ್ಲಿ ಹಣ ಗಳಿಕೆಯೇ ಮುಖ್ಯವಾಗಿರುತ್ತದೆ. ಸಾಕಷ್ಟು ಹಣ, ಅಂತಸ್ತು ಸಂಪಾದಿಸುತ್ತಾರೆ. ಆದರೆ ಸುಖವಾಗಿ ಇರಬೇಕಾದ ಕಾಲಘಟ್ಟದಲ್ಲಿ ದುಡಿದ ಹಣವನ್ನು ಆರೋಗ್ಯಕ್ಕಾಗಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಕೇವಲ ಹಣ ಗಳಿಕೆಯೇ ಮುಖ್ಯವಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಎಚ್.ಕೆ. ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್‌. ಅಚ್ಯುತ್‌ರಾವ್‌, ಜಿಲ್ಲಾ ವಿಪ್ರ ನೌಕರರ ಸಂಘದ ಗೌರವಾಧ್ಯಕ್ಷ ಎಚ್.ಎನ್‌. ಛಾಯಾಪತಿ, ಉಪಾಧ್ಯಕ್ಷ ಜಿ.ಎಸ್‌. ಅನಂತ, ಕಾರ್ಯದರ್ಶಿ ಬಿ.ಕೆ. ರವೀಂದ್ರನಾಥ್‌, ಉಪಾಧ್ಯಕ್ಷ ಜಿ.ಎಸ್‌. ಅನಂತ ಮತ್ತಿತರರು ಇದ್ದರು.

ಈ ಸಂದರ್ಭದಲ್ಲಿ ಸುವರ್ಣ ದಾಂಪತ್ಯ ನಡೆಸಿದ ಬಿ.ಎಂ. ಸುಬ್ರಹ್ಮಣ್ಯ, ಕೆ.ಎಂ. ರಾಮಸ್ವಾಮಿ, ವಿ.ಆರ್‌. ರಾಮಸ್ವಾಮಿ ಅಯ್ಯಂಗಾರ್‌, ಲಕ್ಷ್ಮೀನಾರಾಯಣ ಭಟ್, ಹರಿನಾರಾಯಣ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿಪ್ರ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next