Advertisement

ಸಂವಿಧಾನ ವಿರೋಧಿ ಮಾತುಗಳಿಂದ ಬಿಕ್ಕಟ್ಟು

12:27 PM Jun 09, 2019 | Team Udayavani |

ಶಿವಮೊಗ್ಗ: ಜನಪ್ರತಿನಿಧಿಗಳ ಸಂವಿಧಾನ ವಿರೋಧಿ ಮಾತುಗಳೇ ವರ್ತಮಾನದ ಬಿಕ್ಕಟ್ಟುಗಳಾಗಿವೆ. ಇವು ದೊಡ್ಡ ಆತಂಕ ಸೃಷ್ಟಿಸಿದೆ. ಈ ನಮ್ಮ ದೇಶ ವೈವಿಧ್ಯತೆಗಳ ಅಸ್ಮಿತೆಯನ್ನು ಉಸಿರಾಡಿಕೊಂಡೇ ಬಂದಿದೆ. ಬಹುತ್ವದ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಒಕ್ಕೂಟದ ಗಣತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡು, ಎಲ್ಲರನ್ನೂ, ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಕನಸಿನ ಬಹುತ್ವ ಭಾರತದ ಪರಂಪರೆಗೆ ದಕ್ಕೆಯಾಗದಂತೆ ನಡೆದುಕೊಳ್ಳಬೇಕಾದ ಜವಾಬ್ದಾರಿಯಿದೆ ಎಂದು ಹಿತ ನುಡಿದವರು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌. ಜಿ. ಸಿದ್ಧರಾಮಯ್ಯ ಅವರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಶುಕ್ರವಾರ ನಗರದ ಚಂದನ ಸಭಾಂಗಣದಲ್ಲಿ ವರ್ತಮಾನದ ಬಿಕ್ಕಟ್ಟುಗಳು, ಬುದ್ಧ- ಬಸವ- ಗಾಂಧಿ- ಅಂಬೇಡ್ಕರ್‌ ವಿಚಾರ, ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶಕ್ಕೆ ಜಾತಿವ್ಯವಸ್ಥೆ ಶಾಪವಾಗಿದೆ. ಚಾರ್ತುವರ್ಣ ವ್ಯವಸ್ಥೆ ಅಸಮಾನತೆಯನ್ನು ಬಿತ್ತಿದೆ. ಈ ದೇಶಕ್ಕೆ ಹೊಸ ಆಕ್ರಮಣಗಳು ನಡೆದವು. ವಸಾಹತು ಕಾರಣದಿಂದ ಇನ್ನೂ ಬಿಡುಗಡೆ ಆಗಿಲ್ಲ. ಮೂರ್ತ, ಅಮೂರ್ತ ರೂಪವಾಗಿ ಇದರ ವಿರುದ್ಧ ಹೋರಾಟ ಮಾಡಿದ ನಾಲ್ವರು ಮಹನೀಯರೂ ಮನುಷ್ಯರ ಅಸಮಾನತೆಯ ವಿರುದ್ಧ ಪರ್ಯಾಯ ವ್ಯವಸ್ಥೆ ರೂಪಿಸಲು ಹೋರಾಡಿದ್ದಾರೆ ಎಂದು ವಿವರಿಸಿದರು.

ಬುದ್ಧನ ಚಿಂತನೆಗಳ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ| ಸಣ್ಣರಾಮ, ಎರಡೂವರೆ ಸಾವಿರ ವರ್ಷಗಳ ಹಿಂದೆ ಜನಿಸಿದ ಬೌದ್ಧ ಧರ್ಮ ಇಂದಿಗೂ ಪ್ರಸ್ತುತವಾಗಿದೆ. ನಾವು ಬದುಕಿ ಇತರರೂ ಬದುಕಬೇಕು ಎಂಬುವ ಸರಳಮಾರ್ಗ, ಅಪರೂಪದ ವಿಚಾರಧಾರೆಗಳನ್ನು ಕೋಟ್ಟಿದ್ದಾರೆ. ಆದರೆ ದೊಡ್ಡ ದೊಡ್ಡವರೇ ಅಪರೂಪದ ಶಿಕ್ಷಣ ಪಡೆದವರೇ, ವಿಜ್ಞಾನಿಗಳೇ ಮೂಡನಂಬಿಕೆ ಬಿತ್ತುವ ಕೆಲಸ ಮಾಡಿದರೆ ವಿಚಾರವಂತಿಕೆಗೆ ಜಾಗವೆಲ್ಲಿ ಎಂದು ಪ್ರಶ್ನಿಸಿದರು.

ಬಸವ ಚಿಂತನೆ ಕುರಿತು ಸಾಹಿತಿ, ಚಿಂತಕ ಡಾ| ಪ್ರಶಾಂತ್‌ ಜಿ. ನಾಯಕ ಅವರು ವಿವರಿಸಿ, ವಚನ ಚಳುವಳಿ ಸಾಮಾನ್ಯ ಮನುಷ್ಯನ ಕೇಂದ್ರಿತವಾದ ಯೋಜನೆಯಾಗಿತ್ತು. ದೇಶ ಕೆಟ್ಟು ಹೋಗಿದೆ, ಊರು ಕೆಟ್ಟಿದೆ ಎಂದರೆ ನೀವೇ ಓಟು ಹಾಕಿ ಆರಿಸಿದ ಪ್ರತಿನಿಧಿ ಕಾರಣವಲ್ಲವೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕು. ಅದಕ್ಕೆ ಬಸವಣ್ಣನವರು ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ತನುವ ಸಂತೈಸಿಕೊಳ್ಳಿ ಎನ್ನುವ ಮಾತು ಹೇಳುತ್ತಾರೆ. ನಮ್ಮ ಮನಸ್ಸು ಸರಿಮಾಡಿಕೊಳ್ಳುವ ಕೆಲಸ ಆಗಬೇಕಿದೆ ಎಂದು ವಿವರಿಸಿದರು.

Advertisement

ಡಾ| ಬಿ. ಆರ್‌. ಅಂಬೇಡ್ಕರ್‌ ಚಿಂತನೆಗಳ ಕುರಿತು ಹಿರಿಯ ಸಾಹಿತಿ, ಚಿಂತಕ ಡಾ| ರಾಜೇಂದ್ರ ಚೆನ್ನಿ ಅವರು ಮಾತನಾಡಿ, ಜಗತ್ತಿನಲ್ಲಿ ಅತಿಹೆಚ್ಚು ಶಿಕ್ಷಣ ಪಡೆದ ಜನನಾಯಕರಾಗಿದ್ದ ಕಾರಣ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯಿತು. ಅಲ್ಲಿ ಅವರಾಡಿದ ಮಾತುಗಳ ಬ್ರಿಟಿಷ್‌ ಸರ್ಕಾರದ ಗಮನ ಸೆಳೆಯುವಂತೆ ಮಾಡಿದ್ದನ್ನು ವಿವರಿಸಿದರು. ಪ್ರತ್ಯೇಕ ಪ್ರಾತಿನಿಧ್ಯ ಕೊಡಬೇಕು. ನಮಗೆ ಮೀಸಲು ಕ್ಷೇತ್ರ ಕೊಡಬೇಕು. ಸಮಾಜದಲ್ಲಿ ಅಕ್ಷರಜ್ಞಾನ, ಸಮಾನತೆಯಿಲ್ಲದಿದ್ದರೆ, ಶೋಷಣೆಗೆ ಒಳಗಿರುವ ಜನರಿಗೆ ನಾವು ನ್ಯಾಯ ಕೊಡಿಸಲು ಇರುವ ಅವಕಾಶವೆಂದರೆ ಅದು ಪಾರ್ಲಿಮೆಂಟ್ ಮಾತ್ರ. ಎಂದು ಪ್ರತಿಪಾದಿಸಿದ್ದನ್ನು ಅವರು ವಿವರಿಸಿದರು.

ಗಾಂಧಿ ಚಿಂತನೆ ಕುರಿತು ಸಾಹಿತಿಗಳು, ಚಿಂತಕರಾದ ಡಾ| ಎಚ್. ಟಿ. ಕೃಷ್ಣಮೂರ್ತಿ ಅವರು ಗಾಂಧಿ ಅವರು ಸಾರ್ವಜನಿಕವಾಗಿ ಅನೇಕ ಟೀಕೆಗಳನ್ನು ಎದುರಿಸಿದವರು. ಅವರಷ್ಟು ಸಾರ್ವಜನಿಕವಾಗಿ ತೆರೆದುಕೊಂಡ ವ್ಯಕ್ತಿತ್ವ ಬೇರೊಂದು ಸಿಗದು ಎಂದು ಅವರ ವಿಚಾರಗಳು ಇವತ್ತಿನ ಬಿಕ್ಕಟ್ಟುಗಳನ್ನು ಕುರಿತು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಎಸ್‌. ಎನ್‌. ನಾಗರಾಜ್‌, ಕುವೆಂಪು ಶಿಕ್ಷಣ ಮಹಾವಿದ್ಯಾಲಯ ಸಮಿತಿ ಅಧ್ಯಕ್ಷರಾದ ಕಡಿದಾಳು ಗೋಪಾಲ ಅವರು ಮುಖ್ಯ ಅತಿಥಿಗಳಾಗಿದ್ದರು. ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಶಾಲಿನಿ ಜೆ., ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಕೆ. ಪ್ರಕಾಶ್‌ ಇದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಸೂರ್ಯಪ್ರಕಾಶ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಾದೇವ್‌ ಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next