Advertisement

ಅನುದಾನ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಕರೆ

04:01 PM Jul 26, 2019 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ಎಸ್‌.ಸಿ.ಪಿ. ಮತ್ತು ಟಿ.ಎಸ್‌.ಪಿ. ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಅನುದಾನವನ್ನು ಉದ್ದೇಶಿತ ಯೋಜನೆಗಳಿಗೆ ಬಳಸಬೇಕು. ಅನುದಾನ ದುರ್ಬಳಕೆ ಆದಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೆ ನಿಯಮಾನುಸಾರ ದಂಡನೆಗೆ ಗುರಿಪಡಿಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗುರುವಾರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಹರಮಘಟ್ಟ, ಬಸನವಗಂಗೂರು ಮತ್ತು ಚಿನ್ಮನೆ ಗ್ರಾಮಗಳಲ್ಲಿ ಈಗಾಗಲೇ ಮಂಜೂರಾಗಿರುವ ಸ್ಮಶಾನ ಭೂಮಿಯನ್ನು ತಹಶೀಲ್ದಾರರು ವಶಕ್ಕೆ ಪಡೆದು, ಅಭಿವೃದ್ಧಿಪಡಿಸಿ, ಗ್ರಾಪಂಗಳಿಗೆ ಶೀಘ್ರವಾಗಿ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ಸೂಚಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಇರಬಹುದಾದ ಸ್ಮಶಾನಭೂಮಿಯನ್ನು ಅನ್ಯರು ಆಕ್ರಮಿಸಿಕೊಳ್ಳದಂತೆ ಮಿತಿ ಗುರುತಿಸಿ, ಸಾರ್ವಜನಿಕ ಸೇವೆಗೆ ಮುಕ್ತವಾಗಿರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.

ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ಸುಮಾರು 70 ಜನರಿಗೆ ತಲಾ 2ಎಕರೆಯಂತೆ ಮಂಜೂರಾಗಿರುವ ಜಮೀನಿನ ಹದ್ದುಬಸ್ತು ಹಾಗೂ ಅಳತೆ ಮಾಡಿಸುವ ಕಾರ್ಯ ನನೆಗುದಿಗೆ ಬಿದ್ದಿದ್ದು, ಆ. 8ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪೊಲೀಸ್‌ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿ, ಜಮೀನನ್ನು ಅರ್ಹರಿಗೆ ಒದಗಿಸಿಕೊಡುವಂತೆ ಅವರು ಸೂಚಿಸಿದರು.

ತೀರ್ಥಹಳ್ಳಿ ತಾಲೂಕು ವೀರಾಪುರ ಗ್ರಾಮದ ಹರಡವಳ್ಳಿಯಲ್ಲಿ ಖಾಲಿ ನಿವೇಶನದ ಮಧ್ಯೆ ಬಳಸಿಕೊಂಡಿರುವ ದಾರಿಯನ್ನು ಮುಚ್ಚಿ, ಆ ಸ್ಥಳದಲ್ಲಿ ತೆಂಗಿನಗಿಡ ಮತ್ತು ನೀಲಗಿರಿ ಗಿಡಗಳನ್ನು ನೆಟ್ಟಿರುವುದರಿಂದ ಸಾರ್ವಜನಿಕರ ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿವೆ. ತೀರ್ಥಹಳ್ಳಿಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಚಿತ್ರ ವರದಿ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದು ರುಜುವಾತಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದರು.

ಭದ್ರಾವತಿ ತಾಲೂಕಿನ ದುಷ್ಕರ್ಮಿಗಳ ಸಂಚಿಗೆ ಬಲಿಯಾದ ಕುಮಾರ್‌ ಕುಟುಂಬಕ್ಕೆ ಈವರೆಗೂ ಪರಿಹಾರ ಧನ ವಿತರಣೆಗೆ ಕ್ರಮ ವಹಿಸಿಲ್ಲ. ಅಲ್ಲದೇ ನಿರ್ಮಾಣ ಹಂತದಲ್ಲಿದ್ದ ಮ್ಯಾನ್‌ಹೋಲ್ನಲ್ಲಿ ಬಿದ್ದು ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ಧನ ವಿತರಣೆ ಆಗುವಂತೆ ಕ್ರಮ ವಹಿಸಲು ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಶಿವರಾಮೇ ಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅಶ್ವಿ‌ನಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next