ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಮಹಾನಗರ ಪಾಲಿಕೆ ಸೋತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿ, ಗದ್ದಲ ಎಬ್ಬಿಸಿದ ಘಟನೆ ಶನಿವಾರ ನಡೆದ ಪಾಲಿಕೆ ಸಭೆಯಲ್ಲಿ ನಡೆಯಿತು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಆಚರಣೆ ಹಾಗೂ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಹಾಗೂ ಕೈಗೊಂಡ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ಕುರಿತಂತೆ ಮೇಯರ್ ಲತಾ ಗಣೇಶ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ನೆರೆ ಪರಿಹಾರ ಕುರಿತ ಚರ್ಚೆಗೆ ಆಗ್ರಹಿಸಿದರು. ಪಾಲಿಕೆ ಪರಿಹಾರ ವಿತರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಸದಸ್ಯರಾದ ಎಚ್.ಸಿ. ಯೋಗೀಶ್, ನಾಗರಾಜ್ ಕಂಕಾರಿ, ರಮೇಶ್ ಹೆಗ್ಡೆ, ಸತ್ಯನಾರಾಯಣ್‌ರಾಜ್, ಆರ್.ಸಿ. ನಾಯ್ಕ ಸಭಾಂಗಣದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಒಂದು ಹಂತದಲ್ಲಿ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗುತ್ತಾ ಆಯುಕ್ತರ ಬಳಿ ಬಂದು ಟೇಬಲ್ ಗುದ್ದಿ, ಇದು ಅನ್ಯಾಯ ಎಂದು ಗದ್ದಲ ಎಬ್ಬಿಸಿದರು.
ನೆರೆ ಸಂತ್ರಸ್ತರಿಗೆ 10 ಸಾವಿರ ಹಣ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಯಾರಿಗೂ ಹಣ ತಲುಪಿಲ್ಲ. ಮನೆ ಮಠ ಕಳೆದುಕೊಂಡು ಸಂತ್ರಸ್ತರಾದವರನ್ನು ಸಂತೈಸುವ ಕೆಲಸ ಪಾಲಿಕೆ ಮಾಡಿಲ್ಲ ಎಂದು ಕಾಂಗ್ರೆಸ್ ಜೆಡಿಎಸ್ ಸದಸ್ಯರು ಆರೋಪಿಸಿದರು. ವಿರೋಧ ಪಕ್ಷದ ನಾಯಕ ಬಿ.ಎ.ರಮೇಶ್ ಹೆಗ್ಡೆ ಮಾತನಾಡಿ, ಸಂತ್ರಸ್ತರು ಈಗಾಗಲೇ ಸಾಕಷ್ಟು ಸಂಕಟ ಅನುಭವಿಸುತ್ತಿದ್ದಾರೆ. ಸರ್ಕಾರ ಹಾಗೂ ಪಾಲಿಕೆ ತಕ್ಷಣವೇ 10 ಸಾವಿರ ರೂ., ಕೊಡುವುದಾಗಿ ಭರವಸೆ ನೀಡಿತ್ತು. ಮನೆ ಕಳೆದುಕೊಂಡವರಿಗೆ 5 ಲಕ್ಷ ನೀಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಸಂತ್ರಸ್ತರಿಗೆ ಹಣ ನೀಡಿಲ್ಲ ಎಂದು ದೂರಿದರಲ್ಲದೆ, ಇದಕ್ಕೆ ಸಭೆಯಲ್ಲಿ ತಕ್ಷಣವೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸದಸ್ಯ ಎಚ್.ಸಿ. ಯೋಗೀಶ್ ಸಭಾಂಗಣದ ಮುಂದೆ ‘ಹಣ ಬಂತೇ, ಹಣ ಬಂತೇ’ ಎಂದು ಪ್ರತಿಭಟನೆಯ ಘೋಷಣೆ ಕೂಗಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ತಮ್ಮ ಸಹಮತ ವ್ಯಕ್ತಪಡಿಸಿದರು. ಒಂದು ಕ್ಷಣ ಸಭೆ ಗದ್ದಲ,. ಗಲಾಟೆಯ ಗೂಡಾಯಿತು. ಆಡಳಿತ ಪಕ್ಷದ ಸದಸ್ಯರು ಸಹ ಇವರ ಆರೋಪವನ್ನು ಅಲ್ಲಗೆಳೆದು, ವಾದಕ್ಕಿಳಿದರು. ಉಪಮೇಯರ್ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಈ ಕುರಿತು ಚರ್ಚೆ ಮಾಡೋಣ, ಪಾಲಿಕೆ ಸಮರ್ಪಕವಾಗಿ ನೆರೆಯನ್ನು ಎದುರಿಸಿದೆ. ಲೋಪಗಳು ಇರಬಹುದು. ಎಲ್ಲರೂ ಕುಳಿತು ಬಗೆಹರಿಸಿಕೊಳ್ಳೋಣ, ಇದಕ್ಕೆ ವಿಪಕ್ಷ ಸದಸ್ಯರ ಸಹಕಾರ ಬೇಕಾಗಿದೆ. ಗಲಾಟೆ, ಗದ್ದಲ ಬೇಡ, ಎಲ್ಲರೂ ಸೇರಿ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದರು. ನಂತರ ಸದಸ್ಯರು ತಮ್ಮ ಪ್ರತಿಭಟನೆ ಕೈ ಬಿಟ್ಟು ವಾಪಸಾದರು. ಪಾಲಿಕೆ ಕಾರ್ಯ ನಿರ್ವಹಣಾಧಿ ಕಾರಿಗಳು ವಾರ್ಡುವಾರು ಅರ್ಜಿ ಹಾಗೂ ಪರಿಹಾರ ನೀಡಿಕೆಯ ವಿವರಗಳನ್ನು ಸಭೆಯ ಗಮನಕ್ಕೆ ತಂದರು. ಆಯುಕ್ತೆ ಚಾರುಲತಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.