Advertisement

ಮಲೆನಾಡಲ್ಲಿ ಭೂತವಾಗಿ ಕಾಡುತ್ತಿದೆ ಅಡಕೆ ಸಿಪ್ಪೆ

11:24 AM Jan 25, 2020 | Naveen |

ಶಿವಮೊಗ್ಗ: ಅಡಕೆ ಬೇಕು. ಅದರ ಸಿಪ್ಪೆ ಬೇಡ. ಹೀಗಾಗಿ ಅನೇಕ ಸಂಶೋಧನೆಗಳ ನಂತರವೂ ಅಡಕೆ ಸಿಪ್ಪೆ ವಿಲೇವಾರಿ ಸಮಸ್ಯೆಯಾಗಿಯೇ ಉಳಿದಿದೆ. ಅಡಕೆ ಸಿಪ್ಪೆಯನ್ನು ಕಾಂಪೋಸ್ಟ್‌ ಮಾಡುವ ಸಂಶೋಧನೆಗಳು ಬೆಳಕಿಗೆ ಬಂದರೂ ರೈತರ ನಿರಾಸಕ್ತಿಯಿಂದ ಪರಿಹಾರ ಕಾಣುತ್ತಿಲ್ಲ. ಹೀಗಾಗಿ ಪ್ರತಿವರ್ಷ ಅಡಕೆ ಬೆಳೆ ಕೀಳುವ ಸಂದರ್ಭದಲ್ಲಿ ರಸ್ತೆ ಬದಿ ಸೇರಿದಂತೆ ಎಲ್ಲಿ ನೋಡಿದರಲ್ಲಿ ಅಡಕೆ ಸಿಪ್ಪೆಯ ರಾಶಿಯೇ ಕಾಣುತ್ತಿದ್ದು, ದಾರಿಹೋಕರಿಗೆ ಭೂತವಾಗಿ ಕಾಡುತ್ತಿದೆ.

Advertisement

ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ಅಡಕೆ ಬೆಳೆಯುವ ರಾಜ್ಯ. ಮಲೆನಾಡು, ಅರೆ
ಮಲೆನಾಡು, ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಅಡಕೆ ಬೆಳೆಯಲಾಗುತ್ತಿದೆ. ವರ್ಷದಿಂದ
ವರ್ಷಕ್ಕೆ ಅಡಕೆ ಬೆಳೆ ಸಾವಿರಾರು ಹೆಕ್ಟೇರ್‌ಗೆ ವಿಸ್ತರಣೆಗೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಡಕೆ ಕಡಿಮೆ ಖರ್ಚಿನ ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಿದೆ. ಭತ್ತ ಬೆಳೆಗಾರರು ಕೂಡ ಅಡಕೆಯತ್ತ ವಾಲುತ್ತಿದ್ದಾರೆ. ಅಡಕೆ ಬೆಳೆ ಹೆಚ್ಚಿದಂತೆ ಇದರ ಸಿಪ್ಪೆ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದೆ.

ಹೊಗೆ-ವಾಸನೆ: ಅಡಕೆ ಸುಲಿದ ನಂತರ ಅದನ್ನು ರಸ್ತೆ ಪಕ್ಕದ ಗುಂಡಿಗಳಿಗೆ
ತಂದು ಸುರಿಯಲಾಗುತ್ತಿದೆ. ಹೀಗೆ ಸುರಿಯುವ ಅಡಕೆ ಮಳೆಗಾಲದಲ್ಲಿ ಕೊಳೆತು ದುರ್ವಾಸನೆ ಬೀರುತ್ತದೆ. ಕೆಲವರು ಒಣಗಿದ ಸಿಪ್ಪೆಗೆ ಬೆಂಕಿ ಹಾಕುವ ಚಾಳಿ ಇಟ್ಟುಕೊಂಡಿದ್ದಾರೆ. ಇದರಿಂದ
ರಸ್ತೆಗಳಲ್ಲಿ ದಟ್ಟ ಹೊಗೆ ಆವರಿಸಿರುತ್ತದೆ. ತೀರ್ಥಹಳ್ಳಿ ರಸ್ತೆಯಲ್ಲಿ ಈಚೆಗೆ ಇಬ್ಬರು ಬೈಕ್‌ ಸವಾರರು ಈ ಹೊಗೆಯಿಂದ ರಸ್ತೆ ಕಾಣದೆ ಬಿದ್ದು ಗಾಯಗೊಂಡ ಪ್ರಸಂಗವೂ ನಡೆದಿದೆ. ಬೇಸಿಗೆ ಸಮಯದಲ್ಲಿ ಕಾಡಿಗೆ ಬೆಂಕಿ ಬೀಳುವ ಅವಘಡಗಳಿಗೂ ಕಾರಣವಾಗುತ್ತಿದೆ. ಮೊದಲೆಲ್ಲ ರೈತರೇ ಅಡಕೆ ಸುಲಿದು ಸಿಪ್ಪೆಯನ್ನು ತಮ್ಮ ತೋಟಕ್ಕೆ ಗೊಬ್ಬರವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಹಸಿ ಅಡಕೆಯನ್ನು ವ್ಯಾಪಾರಸ್ಥರಿಗೆ ಮಾರಾಟ ಮಾಡುವ ಪ್ರಮಾಣ ಹೆಚ್ಚಿದೆ. ಅಡಕೆ ಖರೀದಿಸುವ ವ್ಯಾಪಾರಸ್ಥರು ಸಿಪ್ಪೆಯನ್ನು ರಸ್ತೆ ಬದಿ ಸುರಿಯುತ್ತಿದ್ದಾರೆ. ಆಯಾ ಗ್ರಾಪಂಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ವ್ಯಾಪಾರಸ್ಥರು ಹೆದರುತ್ತಿಲ್ಲ.

ಖನಿಜಾಂಶಗಳ ಆಗರ: ಅಡಕೆ ಸಿಪ್ಪೆಯು ಸಾಮಾನ್ಯ ಗೊಬ್ಬರಕ್ಕಿಂತ ಅತಿ ಉತ್ತಮ
ಖನಿಜಾಂಶಗಳನ್ನು ಹೊಂದಿದೆ. ಕೊಟ್ಟಿಗೆ ಗೊಬ್ಬರಕ್ಕಿಂತ ಕಾರ್ಬನ್‌- ನೈಟ್ರೋಜೆನ್‌, ಸಾರಜನಕ, ಫಾಸ್ಪರಸ್‌, ಪೊಟ್ಯಾಷ್‌, ಕ್ಯಾಲ್ಸಿಯಂ, ಮೆಗ್ನಿàಷಿಯಂ, ಸಾವಯವ
ಇಂಗಾಲ, ಜಲಜನಕ ಪ್ರಮಾಣವು ಹೆಚ್ಚಿದೆ. ಕೊಟ್ಟಿಗೆ ಗೊಬ್ಬರಕ್ಕಿಂತ ಹೆಚ್ಚು ಉತ್ಕೃಷ್ಟವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ರೈತರಿಗೆ ಅಡಕೆ ಸಿಪ್ಪೆ ಕಾಂಪೋಸ್ಟ್‌ನ ಮಹತ್ವ ತಿಳಿದಿಲ್ಲ.

4.73 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ: ಭಾರತದಲ್ಲಿ 3.73 ಲಕ್ಷ ಹೆಕ್ಟೇರ್‌ನಲ್ಲಿ ಅಡಕೆ ಬೆಳೆ ಇದೆ.
ವಾರ್ಷಿಕ 7.06 ಲಕ್ಷ ಟನ್‌ ಅಡಕೆ ಉತ್ಪಾದನೆ ಇದೆ. ಕರ್ನಾಟದಲ್ಲಿ 2.17 ಲಕ್ಷ ಹೆಕ್ಟೇರ್‌ನಲ್ಲಿ
ಬೆಳೆ ಇದ್ದು 3.24 ಲಕ್ಷ ಟನ್‌ ವಾರ್ಷಿಕ ಉತ್ಪಾದನೆ ಇದೆ. ಪ್ರತಿ ಹೆಕ್ಟೇರ್‌ ತೋಟದಲ್ಲಿ 7015 ಕೆಜಿ ಎಲೆ, 375 ಕೆಜಿ ಗೊನೆ ಹಾಗೂ 1404 ಕೆಜಿ ಅಡಕೆ ಸಿಪ್ಪೆಯ ಒಣ ತ್ಯಾಜ್ಯ ಉತ್ಪತ್ತಿಯಾಗುತ್ತದೆ.

Advertisement

ಅಡಕೆ ಬೆಳೆಗೆ ಅನುಕೂಲ
ಅಡಕೆ ಬೆಳೆಗೆ ಬೇಕಾದ ಪೊಟ್ಯಾಷ್‌ ಅಂಶ ಹೆಚ್ಚಿರುವುದರಿಂದ ಅಡಕೆ ಹೂವು ಕಟ್ಟಲು, ಗೊನೆ ಬಿಡುವುದಕ್ಕೆ ಸಿಪ್ಪೆ ಅತ್ಯುತ್ತಮ ಗೊಬ್ಬರ. ಜತೆಗೆ ಕಾಯಿ ಉದುರುವುದನ್ನು ತಡೆಯುತ್ತದೆ. ಈ ಹಿಂದೆ ಸಣ್ಣಪುಟ್ಟ ರೈತರು ಅಡಕೆ ಸಿಪ್ಪೆಯನ್ನು
ಗುಂಡಿಯಲ್ಲಿ ಮೊದಲು ಹಾಕಿ, ನಂತರ ಮನೆ ಗೊಬ್ಬರ ಹಾಕುತ್ತಿದ್ದರು. ಅದು ಕೊಳೆಯುತ್ತಿತ್ತು. ಈಗ ರೈತರು ಮೈ ನೋಯಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ
ಅಧಿ ಕಾರಿಗಳು. ಈ ಹಿಂದೆ ಅಡಕೆ ಸಿಪ್ಪೆ ಕೊಳೆಯಲು ಒಂದೂವರೆ, ಎರಡು ವರ್ಷ ತಗಲುತಿತ್ತು. ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವು ಸೂಕ್ಷ್ಮ, ಎರೆಹುಳುಗಳನ್ನು
ಬಳಸಿ 6 ತಿಂಗಳಲ್ಲೇ ಗೊಬ್ಬರ ತಯಾರಿಸುವ ವಿಧಾನ ಸಂಶೋಧಿಸಿದೆ ಅಡಕೆ ಸಿಪ್ಪೆ ಕಾಂಪೋಸ್ಟ್‌ ಅತಿ ಹೆಚ್ಚು ಪೊಟ್ಯಾಷ್‌ ಹೊಂದಿದೆ.

ರೈತರು ಅದನ್ನು ತಮ್ಮ ತೋಟಗಳಲ್ಲೇ ತಯಾರು ಮಾಡಿಕೊಳ್ಳಬಹುದು.
ಮಾಹಿತಿ ಬೇಕಾದವರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು. ಗ್ರಾಪಂ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಪಂಗಳು ಕೂಡ ರಸ್ತೆ ಬದಿ ಸಿಪ್ಪೆ ಹಾಕುವವರಿಗೆ
ದಂಡ ವಿಧಿ ಸಬೇಕು.
ಯೋಗೇಶ್‌,
ಡಿಡಿ, ತೋಟಗಾರಿಕೆ ಇಲಾಖೆ

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next