Advertisement
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 5500 ಕುಟುಂಬಗಳು ನೆರೆಬಾಧಿತ ಎಂದು ಗುರುತಿಸಲಾಗಿದೆ. 2400 ಕುಟುಂಬಗಳಿಗೆ ಈಗಾಗಲೇ ತುರ್ತು ಪರಿಹಾರವಾಗಿ ತಲಾ 10 ಸಾವಿರ ರೂ. ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದರು.
Related Articles
Advertisement
ಬಾಡಿಗೆ ಮನೆಯಲ್ಲಿದ್ದು ಮನೆ ಕಳೆದುಕೊಂಡಿರುವವರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಇವರಿಗೆ ವಸತಿ ಯೋಜನೆಯಡಿ ಮನೆಗಳನ್ನು ಒದಗಿಸುವ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಅವರು ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾನಿ ವಿವರ: ಅತಿವೃಷ್ಟಿ ಹಾಗೂ ಪ್ರವಾಹದಿಂದ 70 ಜಾನುವಾರುಗಳು ಹಾಗೂ 23 ಸಾವಿರ ಕೋಳಿ ಸಾವಿಗೀಡಾಗಿವೆ. ಇವುಗಳ ಮಾಲಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ನೀಡುವ ಕಾರ್ಯ ಚಾಲನೆಯಲ್ಲಿದೆ. ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 10 ಮಂದಿ ಸಾವಿಗೀಡಾಗಿದ್ದು, ಅವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಎರಡು ಮೃತದೇಹಗಳಿಗಾಗಿ ಎನ್‌ಡಿಆರ್‌ಎಫ್ ತಂಡ ಇನ್ನೂ ಹುಡುಕಾಟ ಮುಂದುವರಿಸಿದೆ ಎಂದರು.
ಶಾಶ್ವತ ಪರಿಹಾರ ಪರಿಶೀಲನೆ: ಶಿವಮೊಗ್ಗ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮನೆಗಳು ಪದೇ ಪದೇ ನೆರೆಗೆ ತುತ್ತಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನೆರೆಯ ಬಳಿಕ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಆರೋಗ್ಯ ಇಲಾಖೆ ವತಿಯಿಂದ ಕ್ಲೋರಿನೇಶನ್, ಕೀಟನಾಶಕ ಸಿಂಪಡಿಕೆ ಕಾರ್ಯವನ್ನು ಯುಧ್ದೋಪಾಯಲ್ಲಿ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಉತ್ತಮ ಸಹಕಾರ: ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿ ಕಾರ್ಯದಲ್ಲಿ ಸಾರ್ವಜನಿಕರು, ಅನೇಕ ಸಂಘ- ಸಂಸ್ಥೆಗಳು ಸಕ್ರಿಯವಾಗಿ ಕೈ ಜೋಡಿಸಿದ್ದಾರೆ. ಕೆಲವು ಸಾಹಸ ಅಕಾಡೆಮಿ ಸದಸ್ಯರು ಬೋಟ್‌ಗಳೊಂದಿಗೆ ಬಂದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಎಲ್ಲರ ಸಹಕಾರದಿಂದಾಗಿ ರಕ್ಷಣೆ ಹಾಗೂ ಪರಿಹಾರ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಿದೆ. ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿರುವ ಎಲ್ಲರಿಗೂ ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದರು.