ಶರತ್ ಭದ್ರಾವತಿ
ಶಿವಮೊಗ್ಗ: ಸುಶಿಕ್ಷಿತರ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಶಿವಮೊಗ್ಗದಲ್ಲೇ ದಿನೇ ದಿನೇ ಸೈಬರ್ ಕ್ರೈಂ ಹೆಚ್ಚುತ್ತಿದೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಓದು, ಬರಹ ಗೊತ್ತಿದ್ದವರೇ ಈ ರೀತಿ ಮೋಸಕ್ಕೆ ಒಳಗಾಗಿರುವುದು ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, 2018ರಲ್ಲಿ 48 ಪ್ರಕರಣಗಳು ದಾಖಲಾಗಿದ್ದವು. 2019ರ ಜುಲೈ ಕೊನೆಯವರೆಗೆ 54 ಪ್ರಕರಣ ದಾಖಲಾಗಿವೆ. 2018ರಲ್ಲಿ 2,35,38,163 ರೂ. ಮತ್ತು 2019ರಲ್ಲಿ 1,09,87,513 ರೂ. ವಂಚಿಸಲಾಗಿದೆ. ಈ ಪೈಕಿ 39,45,353 ಹಾಗೂ 22,94,105 ರೂ. ರೀಫಂಡ್ ಹಾಗೂ ಫ್ರೀಜ್ ಮಾಡಲಾಗಿದೆ.
ಒಟಿಪಿ ಪಡೆದು ವಂಚನೆ: 2019ರ ಜೂನ್‌ವರೆಗೆ ದಾಖಲಾದ ಪ್ರಕರಣಗಳಲ್ಲಿ ಬಹುತೇಕ ಒಟಿಪಿ ಪಡೆದು ಇನ್ನೊಂದು ಖಾತೆಗೆ ಹಣ ವರ್ಗಾಯಿಸಲಾಗಿದೆ. ಸಿಮ್ ಕಾರ್ಡ್ ಯಾರದೋ ಹೆಸರುಗಳಲ್ಲಿ ಪಡೆದು ಹಾಗೂ ಖಾತೆ ತೆರೆದು ಅದರ ಮೂಲಕ ಮೋಸ ಮಾಡಲಾಗುತ್ತಿದೆ. ಹೀಗಾಗಿ, ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ.
ಒಟಿಪಿ ಪಡೆದು ವಂಚನೆ, ಎಟಿಎಂ ಸ್ಕಿಮ್ಮಿಂಗ್ ಹಾಗೂ ಫಿಶಿಂಗ್ (ಗಾಳ) ವಿಧಾನದ ಮೂಲಕ ಜನರ ದಾರಿ ತಪ್ಪಿಸಿ ಹಣ ಮಾಡಿಕೊಳ್ಳುತ್ತಿರುವ ವೈಟ್ ಕಾಲರ್ ಅಪರಾಧ ಕಳೆದ ಆರು ತಿಂಗಳಿಂದ ಶಿವಮೊಗ್ಗದಲ್ಲಿ ಹೆಚ್ಚಿದೆ. ಹಣ ಕಳೆದುಕೊಂಡಾತ ಸೈಬರ್, ಎಕಾನಮಿಕ್, ನಾರ್ಕೋಟಿಕ್ ಮತ್ತು ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದರೂ ಅಷ್ಟೊತ್ತಿಗಾಗಲೇ ಖಾತೆಗೆ ರವಾನೆಯಾದ ಹಣ ಖಾಲಿ ಆಗಿರುತ್ತದೆ.
ಸೇವೆಯ ಹೆಸರಿನಲ್ಲೂ ಮೋಸ ಮಾಡಿದ ಬಗ್ಗೆ ದೂರು ದಾಖಲಾಗಿದೆ. ಇಂಗ್ಲೆಂಡ್ ಮೂಲದ ಮಹಿಳೆಯೊಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಹೇಳಿ ಇ- ಮೇಲ್ ಮಾಡಿದ್ದಾರೆ. ತಮ್ಮಲ್ಲಿ 5.7 ಕೋಟಿ ಡಾಲರ್ ಆಸ್ತಿ ಇದೆ. ಅದನ್ನು ಭಾರತದ ಬಡವರಿಗೆ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಡಾಲರ್‌ನಿಂದ ರೂಪಾಯಿಗೆ ಕರೆನ್ಸಿ ಪರಿವರ್ತಿಸಲು ಹಣ ಬೇಕಾಗಿದ್ದು, ನೀಡುವಂತೆ ಕೋರಿ 33 ಲಕ್ಷ ರೂ. ಮೋಸ ಮಾಡಲಾಗಿದೆ. ಈ ಪೈಕಿ, 15.94 ಲಕ್ಷ ರೂ. ವಾಪಸ್ ಕೊಡಿಸಿದ್ದಾರೆ.
ಖಾತೆಯಿಂದ ಲಪಟಾಯಿಸಿದ ಹಣ ತಕ್ಷಣ 50-100 ಪೇಟಿಎಂ, ವೈಯಕ್ತಿಕ ಖಾತೆ ಮತ್ತಿತರ ವ್ಯಾಲೆಟ್‌ಗಳಿಗೆ ಸಣ್ಣ ಪ್ರಮಾಣದಲ್ಲಿ ಹಣವನ್ನು ವರ್ಗಾಯಿಸಲಾಗುತ್ತದೆ. ಹೀಗಾಗಿ, ಮೋಸಕ್ಕೆ ಒಳಗಾದವರು ಸಾಧ್ಯವಾದಷ್ಟು ಬೇಗ ಠಾಣೆಗೆ ದೂರು ನೀಡಬೇಕು. ಆಗ, ಅಕೌಂಟ್ ಡೆಬಿಟ್ ಫ್ರೀಜ್ ಮಾಡಿಸಲಾಗುತ್ತದೆ. ವಿಳಂಬವಾದರೆ ಹಣ ಸಿಗುವುದೇ ಅನುಮಾನ ಎನ್ನುತ್ತಾರೆ ಸೈಬರ್ ಕ್ರೈಂ ಅಧಿಕಾರಿಗಳು.