ಶಿವಮೊಗ್ಗ : ನಗರದಲ್ಲಿ ಸೋಮವಾರ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಜೆ. ಸಿ. ನಗರದ ನದೀಮ್ ಮತ್ತು ಬುದ್ಧ ನಗರದ ಅಬ್ದುಲ್ ರೆಹಮಾನ್ ಎನ್ನಲಾಗಿದೆ.
ಕ್ರಾಂತಿಕಾರಿ ವೀರ ಸಾವರ್ಕರ್ ಫ್ಲೆಕ್ಸ್ ವಿವಾದ ಭುಗಿಲೆದ್ದ ಕೆಲ ಹೊತ್ತಿನ ಬಳಿಕ ಶಿವಮೊಗ್ಗದಲ್ಲಿ ಇಬ್ಬರಿಗೆ ಚೂರಿ ಇರಿತ ಪ್ರಕರಣ ನಡೆದಿದ್ದು ಅದಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಪ್ರೇಮ್ ಸಿಂಗ್ ನಗರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಸಂಜೆ ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಗಾಂಧಿ ಬಜಾರ್ ನ ತರಕಾರಿ ಮಾರುಕಟ್ಟೆ ಬಳಿ ದುಷ್ಕರ್ಮಿಗಳ ತಂಡ ಪ್ರೇಮ್ ಸಿಂಗ್ ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಾಯಗೊಂಡ ಪ್ರೇಮ್ ಸಿಂಗ್ ನನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಡರಾತ್ರಿ ಇಬ್ಬರನ್ನು ಬಂಧಿಸಿದ್ದಾರೆ.
ಫ್ಲೆಕ್ಸ್ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ 3 ದಿನ, ಭದ್ರಾವತಿಯಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಂದೋಬಸ್ತ್ ಉಸ್ತುವಾರಿಯನ್ನು ಎಡಿಜಿಪಿ ಅಲೋಕ್ ಕುಮಾರ್ ವಹಿಸಿದ್ದಾರೆ.