ಶಿವಮೊಗ್ಗ: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡ ಹಾಲಪ್ಪ ಅವರನ್ನು ಶಿವಮೊಗ್ಗದ 2ನೇ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಇದರಿಂದಾಗಿ ಹರತಾಳು ಹಾಲಪ್ಪ ರಾಜಕೀಯ ಭವಿಷ್ಯ ಮತ್ತೆ ಚಿಗುರಿದಂತಾಗಿದೆ.
ಸತತ 7 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಶಿವಮೊಗ್ಗದ 2ನೇ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ರಮಾ ಅವರು ಗುರುವಾರ ಅಂತಿಮ ತೀರ್ಪನ್ನು ಪ್ರಕಟಿಸಿದ್ದಾರೆ.
ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 2009ರ ನವೆಂಬರ್ 26ರಂದು ರಾತ್ರಿ ಹಾಲಪ್ಪ ತನ್ನ ಗೆಳೆಯ ವೆಂಕಟೇಶಮೂರ್ತಿಯ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಮೇ 2, 2010ರಂದು ಈ ಪ್ರಕರಣ ಬಯಲಿಗೆ ಬಂದಿತ್ತು. ಇದರಿಂದಾಗಿ ಹಾಲಪ್ಪ ಸಚಿವ ಸ್ಥಾನ ಕಳೆದುಕೊಳ್ಳುವಂತಾಗಿತ್ತು, ಅಲ್ಲದೇ ರಾಜಕೀಯವಾಗಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು.
ಸಂತ್ರಸ್ತೆಯ ಪತಿ ಪೊಲೀಸರ ಮುಂದೆ 9 ಬಾರಿ ಹೇಳಿಕೆ ಬದಲಿಸಿದ್ದರು. ನಾನು ಮಲಗಿದ್ದಾಗಲೇ ಆರೋಪಿ ಹರತಾಳು ಹಾಲಪ್ಪ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿದ್ದರು. ಹಾಲಪ್ಪ ಹಾಗೂ ಅವರ ಕಡೆಯವರು ನಮಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದರು. ಆದರೆ ಅತ್ಯಾಚಾರದ ಪ್ರಮುಖ ಸಾಕ್ಷ್ಯವನ್ನು ಒದಗಿಸಲು ಸಂತ್ರಸ್ತೆ ವಿಫಲರಾಗಿದ್ದರು. ಹೀಗೆ ಹಾಲಪ್ಪ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು.
ನ್ಯಾಯಾಲಯದ ಸುತ್ತಮುತ್ತ ಮೂವರು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ತೀರ್ಪಿನ ಹಿನ್ನೆಲೆಯಲ್ಲಿ ಹಾಲಪ್ಪ ಕೋರ್ಟ್ ಹಾಲ್ ಗೆ ಆಗಮಿಸಿದ್ದರು.
ಸತ್ಯಕ್ಕೆ ಸಿಕ್ಕ ಜಯ: ಹಾಲಪ್ಪ
ನನ್ನ ವಿರುದ್ಧ ವ್ಯವಸ್ಥಿತ ರಾಜಕೀಯ ಸಂಚು ನಡೆಸಲಾಗಿತ್ತು. ಈಗ ನನ್ನ ವಿರುದ್ಧ ಪಿತೂರಿ ನಡೆಸಿದವರಿಗೆ ನಿರಾಸೆಯಾಗಿದೆ..ಇದು ಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಹರತಾಳು ಹಾಲಪ್ಪ ಅವರು ನೀಡಿದ ಪ್ರತಿಕ್ರಿಯೆ. ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.