ಶಿವಮೊಗ್ಗ: ಸರ್ಕಾರದ ಜೊತೆ ಸಂಘರ್ಷ ಮಾಡದೇ ಸಾಮರಸ್ಯದಿಂದಲೇ ಸರ್ಕಾರಿ ನೌಕರರ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಶುಕ್ರವಾರ ಪ್ರಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರ ಸಹಕಾರ, ಹಾರೈಕೆ, ಸಲಹೆಗಳಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆನೆ. ಈ ಹುದ್ದೆ ಹೂವಿನ ಹಾಸಿಗೆ ಎಂದು ತಿಳಿದುಕೊಂಡಿಲ್ಲ. ಬೇಕಾದಷ್ಟು ಸಮಸ್ಯೆಗಳು ಇಲ್ಲಿವೆ. ರಾಜ್ಯದ 6.40 ಲಕ್ಷ ಸರ್ಕಾರಿ ನೌಕರರ ಪ್ರತಿನಿಧಿಯಾಗಿ ಕೆಲಸ ಮಾಡಬೇಕಾಗುತ್ತದೆ. ನೂರಾರು ಸಮಸ್ಯೆಗಳು ಇವೆ. ಇವುಗಳೆಲ್ಲವನ್ನೂ ಹಂತ ಹಂತವಾಗಿ ಬಗೆಹರಿಸಬೇಕಾಗಿದೆ. ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾಗಿದ್ದಾರೆ. ಇದು ನನಗೆ ಅನುಕೂಲವಾಗುತ್ತದೆ. ಸರ್ಕಾರದ ಜೊತೆ ಸಾಮರಸ್ಯದಿಂದ ಸಮಸ್ಯೆಗಳ ತಿಳಿಸಿ ಬಗೆಹರಿಸಲು ಪ್ರಯತ್ನಿಸುವೆ ಎಂದರು.
ಮೂಲತಃ ತುಮಕೂರು ಜಿಲ್ಲೆಯವನಾದ ನಾನು 1999ರಲ್ಲಿ ಶಿವಮೊಗ್ಗಕ್ಕೆ ಎಸ್‌ಡಿಸಿ ಆಗಿ ಬಂದೆ. ನಂತರ ಹಂತ ಹಂತವಾಗಿ ಜಿಲ್ಲಾಧ್ಯಕ್ಷನಾಗಿ, ಮುಖ್ಯಮಂತ್ರಿಗಳ ಆಪ್ತ ಸಹಾಯಕನಾಗಿ, ಸಮಾಜಮುಖೀ ಕೆಲಸ ಮಾಡುತ್ತಾ, ಇದೀಗ ಅತಿ ಚಿಕ್ಕ ವಯಸ್ಸಿಗೆ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಂಬಿಕೆ ಉಳಿಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿ. ತಾವು ಜಿಲ್ಲಾಧ್ಯಕ್ಷರಾಗಿದ್ದಾಗ ನೆನಪಿನಲ್ಲಿ ಉಳಿಯುವ ನೂರಾರು ಕೆಲಸಗಳನ್ನು ಮಾಡಿದ್ದೇನೆ. ಅದು ನಾನು ರಾಜ್ಯಾಧ್ಯಕ್ಷನಾಗಲು ಸಹಾಯಕವಾಯಿತು ಎಂದರು.
ನೂತನ ಪಿಂಚಣಿ ವ್ಯವಸ್ಥೆ ರದ್ದು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಸುಮಾರು 8 ಸಾವಿರ ಕೋಟಿ ರೂ.ಸರ್ಕಾರಕ್ಕೆ ಹೊರೆಯಾಗಲಿದೆ. ಹಂತ ಹಂತವಾಗಿ ಈ ಬಗ್ಗೆ ಚರ್ಚಿಸಿ ಸರ್ಕಾರದ ಜೊತೆ ಮಾತನಾಡಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಲು ಒತ್ತಾಯಿಸಲಾಗುವುದು. ಇದು ಸರ್ಕಾರಿ ನೌಕರರ ಪ್ರಸ್ತುತ ಸಮಸ್ಯೆಯಾಗಿದೆ. ಇದರ ಜೊತೆಗೆ ಶಿಕ್ಷಕರ ವರ್ಗಾವಣೆ ಸುಮಾರು 2.4 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು, ನೌಕರರಿಗೆ ತರಬೇತಿ ನೀಡುವುದು, ಆರೋಗ್ಯ ಹೀಗೆ ಎಲ ್ಲರೀತಿಯ ಸೌಲಭ್ಯ ನೀಡುವುದು ಸೇರಿದಂತೆ ನೌಕರರ ಸರ್ವತೋಮುಖ ಅಭಿವೃದ್ಧಿಯತ್ತ ಸಂಘ ವಿಕಾಸ ಹೆಜ್ಜೆ ಇಡಲಿದೆ ಎಂದರು.
ಶಿವಮೊಗ್ಗದಲ್ಲಿ ಕೆಇಬಿ ಸರ್ಕಲ್ ಬಳಿ ನೌಕರರ ಸಂಘದ ಕಟ್ಟಡವಿದೆ. ಬೇಕಾದಷ್ಟು ಜಾಗ ಇದೆ. ಅಲ್ಲಿ ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಮುಖ್ಯಮಂತ್ರಿಗಳು ಈಗಾಗಲೇ ಅನುದಾನದ ಭರವಸೆ ನೀಡಿದ್ದಾರೆ. ಈಗ ಕೇವಲ ಶಿವಮೊಗ್ಗ ಜಿಲ್ಲೆ ಅಲ್ಲದೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯಾವ ತಾರತಮ್ಯ ಮಾಡದೆ ಪ್ರಾದೇಶಿಕ ಸಮಾನತೆ ಕಾಪಾಡಿಕೊಂಡು ಸಾಮಾಜಿಕ ನ್ಯಾಯದ ಮತ್ತು ಸಮಾಜ ಮುಖೀ ಕೆಲಸಗಳ ಸಂಘ ಮುಂದುವರಿಸುತ್ತದೆ ಎಂದರು.
ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ಒಂದು ದಿನದ ವೇತನ 200 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಸಂದರ್ಭ ಬಂದರೆ ಮುಂದಿನ ತಿಂಗಳು ಕೂಡ ಒಂದು ದಿನದ ವೇತನವನ್ನು ನೀಡಲು ಸರ್ಕಾರಿ ನೌಕರರು ಸಿದ್ಧ ಎಂದರು.
ಇದರ ನಡುವೆಯೂ ಭಾವುಕರಾಗಿ ಮಾತನಾಡಿದ ಅವರು, ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡರು. ಜೊತೆಗೆ ಇತ್ತೀಚೆಗೆ ಜಿಲ್ಲಾ ಸರ್ಕಾರಿ ನೌಕರರ ಚುನಾವಣಾ ಸಂದರ್ಭದಲ್ಲಿ ತಮ್ಮನ್ನು ಮಾಜಿ ಶಾಸಕರೊಬ್ಬರು ವರ್ಗಾವಣೆ ಮಾಡಿಸಿದ್ದಾರೆ. ಅದನ್ನು ತಾವು ಯಾರ ಹತ್ತಿರ ಹೇಳಿಕೊಳ್ಳಲಿಲ್ಲ. ಈಗಲೂ ನಾನು ವರ್ಗಾವಣೆಯಲ್ಲಿಯೇ ಇದ್ದೇನೆ. ನನ್ನನ್ನು ತುಳಿಯುವ ಕೆಲಸವನ್ನು ಕೆಲವರು ಮಾಡಿದ್ದಾರೆ. ಈ ದ್ವೇಷವನ್ನು ನಾನು ಇಟ್ಟುಕೊಳ್ಳುವುದಿಲ್ಲ ಎಂದರು. ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಇದ್ದರು.