Advertisement

ಕಾಲುಸಂಕ ಸಮಸ್ಯೆಗೆ ಸರ್ಕಾರದಿಂದ ಮುಕ್ತಿ

11:13 AM Jun 28, 2019 | Naveen |

ಶಿವಮೊಗ್ಗ: ಮಲೆನಾಡಿನ ಕಾಲುಸಂಕಗಳ ಸಮಸ್ಯೆಗೆ ಮುಕ್ತಿ ಹಾಡಲು ಸರಕಾರ ಸಿದ್ಧವಾಗಿದ್ದು, ಕೇಳಿದಷ್ಟು ಅನುದಾನ ನೀಡಲು ಮುಂದಾಗಿದೆ. ಮೊದಲ ಹಂತದಲ್ಲಿ 119 ಕಾಲುಸಂಕ (ಮಿನಿಸೇತುವೆ) ನಿರ್ಮಾಣವಾಗಿದ್ದು ಮಲೆನಾಡಿಗರು ನಿಟ್ಟುಸಿರು ಬಿಡುವಂತಾಗಿದೆ.

Advertisement

2018ರ ಮುಂಗಾರಿನಲ್ಲಿ ವಿಪರೀತ ಮಳೆ ಸುರಿದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದವು. ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಪಂ ವ್ಯಾಪ್ತಿಯ ದೊಡ್ಲಿಮನೆಯ ಆಶಿಕಾ ಎಂಬ ಯುವತಿ ಶಾಲೆಗೆ ಹೋಗುವಾಗ ಶಿಥಿಲಗೊಂಡ ಕಾಲುಸಂಕದಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಳು. ಈ ಘಟನೆ ನಂತರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ಶಾಲಾ ಸಂಪರ್ಕ ಸೇತು’ ಎಂಬ ಕಾರ್ಯಕ್ರಮದಡಿ ಮಲೆನಾಡು ಭಾಗದಲ್ಲಿ ಕಾಲುಸಂಕ ನಿರ್ಮಾಣಕ್ಕೆ ಸೂಚನೆ ನೀಡಿದ್ದರು. ಅದರಂತೆ ಜಿಲ್ಲೆಯಲ್ಲಿ 119 ಕಾಲುಸಂಕ ನಿರ್ಮಾಣಗೊಂಡಿವೆ.

ನಿರ್ಮಾಣ ಹೇಗೆ?: ಸ್ಥಳೀಯ ಗ್ರಾಮ ಪಂಚಾಯತಿ, ಲೋಕೋಪಯೋಗಿ ಇಲಾಖೆ, ಶಾಲೆಗಳ ಮುಖ್ಯ ಶಿಕ್ಷಕರ ಸಲಹೆ ಮೇರೆಗೆ ಸ್ಥಳವನ್ನು ಗುರುತಿಸಿ, ಸ್ಥಳದ ಬಗ್ಗೆ ಏನಾದರೂ ತಕರಾರುಗಳಿದ್ದರೆ ಮನವೊಲಿಸಿ ಸೇತುವೆ ನಿರ್ಮಾಣ ಮಾಡಲಾಗಿದೆ. ಶಾಲೆಗಳನ್ನು ಸಂಪರ್ಕಿಸುವ ಕಡೆಯೇ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಸ್ಥಳದ ಲಭ್ಯತೆ ಆಧಾರದ ಮೇಲೆ 1ರಿಂದ 3 ಮೀಟರ್‌ ಅಗಲದ ಸೇತುವೆಗಳ ನಿರ್ಮಾಣವಾಗಿವೆ. ಸೈಕಲ್, ಬೈಕ್‌ಗಳನ್ನು ಇಲ್ಲಿ ಚಲಾಯಿಸಿಕೊಂಡು ಹೋಗಬಹುದು. ಕೆಲವು ಸೇತುವೆಗಳಿಗೆ ಮೆಸ್‌ ಅಳವಡಿಸಲಾಗಿದೆ. ಕೆಲವು ಪೂರ್ಣ ಕಾಂಕ್ರೀಟ್ ಬಳಸಲಾಗಿದೆ. ಅವುಗಳನ್ನು ಸ್ಥಳೀಯ ಗ್ರಾಪಂಗಳಿಗೆ ಹಸ್ತಾಂತರಿಸಲಾಗುವುದು ಎನ್ನುತ್ತಾರೆ ಎಂಜಿನಿಯರ್‌ಗಳು.

ಕಾಲುಸಂಕಗಳಿಗೆ ಪರ್ಯಾಯ: ಮಲೆನಾಡು ಪ್ರದೇಶಗಳಲ್ಲಿ ತೋಡು, ಹಳ್ಳ-ಕೊಳ್ಳಗಳು ಪ್ರವಾಹದಿಂದ ಮಳೆಗಾಲದಲ್ಲಿ ಹಾಗೂ ನವೆಂಬರ್‌, ಡಿಸೆಂಬರ್‌ವರೆಗೂ ತುಂಬಿ ಹರಿಯುತ್ತವೆ. ನೀರಾವರಿ ಯೋಜನೆ ಹಾಗೂ ಅಣೆಕಟ್ಟುಗಳ ನಿರ್ಮಾಣದಿಂದ ಉಂಟಾಗಿರುವ ಹಿನ್ನೀರಿನಿಂದ ಆವೃತವಾದ ಪ್ರದೇಶದಲ್ಲಿ ಈ ಕಾಲುಸಂಕಗಳೇ ಸಂಪರ್ಕ ಸೇತುವೆಗಳಾಗಿವೆ. ಆದರೆ ಇವು ಅಷ್ಟೊಂದು ಸುರಕ್ಷಿತವಾಗಿಲ್ಲ. ಬಹುತೇಕ ಕಡೆ ಸ್ಥಳೀಯವಾಗಿ ಅಡಕೆ ಮರ, ಬಿದಿರು, ಹಗ್ಗದಿಂದ ಹೆಣೆದ ಸೇತುವೆ, ಮರದ ದಿಮ್ಮಿಗಳನ್ನು ಬಳಸಿ ನಿರ್ಮಾಣ ಮಾಡಿರುತ್ತಾರೆ. ಈ ಹರಕು, ಮುರುಕು ಸೇತುವೆಗಳು ಜನರ ಪ್ರಾಣ ಹಿಂಡುತ್ತವೆ.

ಅನುದಾನಕ್ಕಿಲ್ಲ ಬರ: ಮೊದಲ ಹಂತದಲ್ಲಿ ತೀರ್ಥಹಳ್ಳಿ ಹೊಸನಗರ ಭಾಗದಲ್ಲಿ 119 ಕಾಲುಸಂಕಗಳನ್ನು 26.41 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ 300ಕ್ಕೂ ಕಾಲುಸಂಕಗಳು ಜೀರ್ಣೋದ್ಧಾರಕ್ಕೆ ಕಾದಿವೆ. ಇವುಗಳನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಅನುದಾನಕ್ಕೂ ಕೊರತೆ ಇಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

Advertisement

ತೀರ್ಥಹಳ್ಳಿಯ ಘಟನೆ ನಂತರ ಸಿಎಂ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಅವರು ವಿಶೇಷ ಆಸಕ್ತಿ ವಹಿಸಿ ಕಾಲುಸಂಕ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 119 ಮಿನಿಸೇತುವೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಸೇತುವೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದ್ಯಾವುದಕ್ಕೂ ಹಣದ ಕೊರತೆ ಇಲ್ಲ.
•ರಮೇಶ್‌, ಇಇ,
ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next