ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಳೆಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು.
ಭಾರೀ ಮಳೆ ಮತ್ತು ನೆರೆ ಹಾನಿಯಿಂದ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮಳೆ ಮತ್ತು ನೆರೆ ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿವೆ. ಅನೇಕರು ಮನೆ ಕಳೆದುಕೊಂಡಿದ್ದಾರೆ. ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹೀಗಿದ್ದರೂ ಕೂಡ ಸರ್ಕಾರ ಪರಿಹಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ತುಂಗಾ ನದಿ ಪ್ರವಾಹದಿಂದ ಸುಮಾರು 1500 ಕ್ಕೂ ಅಧಿಕ ಮನೆಗಳು ಪೂರ್ಣ, ಭಾಗಶಃ ಹಾನಿಗೊಳಗಾಗಿವೆ. ಸುಮಾರು 6300 ಮನೆಗಳಿಗೆ ನೀರು ನುಗ್ಗಿ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ. ಸಾವಿರಾರು ಕುಟುಂಬಗಳು ನಿರ್ಗತಿಕರಾಗಿದ್ದಾರೆ ಎಂದು ಹೇಳಿದರು. ಒಂದು ತಿಂಗಳಾದರೂ ಶಾಶ್ವತ ಪರಿಹಾರ ನೀಡದೆ ಸಂತ್ರಸ್ತರು ತೊಂದರೆ ಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೆರೆ ಹಾನಿ ಪರಿಶೀಲನೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಘೋಷಿತ ಕೊಳಚೆ ಪ್ರದೇಶದ ಸಂತ್ರಸ್ತರನ್ನು ಒಳಗೊಂಡಂತೆ ಎಲ್ಲಾ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಪೂರ್ಣ ಮನೆ ಕಳೆದಕೊಂಡವರಿಗೆ 5 ಲಕ್ಷ ರೂ. ಹಾಗೂ ಭಾಗಶಃ ಹಾನಿಗೊಳ ಗಾದ ಮನೆಗಳಿಗೆ 1 ಲಕ್ಷ ರೂ., ನೀರು ನುಗ್ಗಿ ಆಸ್ತಿಪಾಸ್ತಿ ಹಾನಿಯಾದ ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರವನ್ನು ಸರ್ಕಾರದಿಂದ ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು. ಆ. 8 ರಂದು ನಡೆದ ನೆರೆಪರಿಹಾರ ವಿಶೇಷ ಸಭೆಯ ನಿರ್ಣಯದಂತೆ ಪೂರ್ಣ ಮನೆ ನಾಶವಾದ ಬಗ್ಗೆ 25,000 ರೂ. ಮತ್ತು ಭಾಗಶಃ ಮನೆ ನಾಶವಾದವರಿಗೆ 10,000 ರೂ ಪರಿಹಾರವನ್ನು ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರದ ಇಮಾಮ್ ಬಡಾ ಪ್ರದೇಶದಲ್ಲಿ ತುಂಗಾನದಿ ತೀರದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ 28 ಸಂತ್ರಸ್ತ ಕುಟುಂಬಗಳಿಗೆ ಮಂಡಳಿ ಗ್ರಾಮದ ಸರ್ವೆ ನಂ. 102 ರಲ್ಲಿ ಮಹಾನಗರ ಪಾಲಿಕೆ ಬಡಾವಣೆಯಲ್ಲಿ ಹಕ್ಕುಪತ್ರ ನೀಡಿರುವ ನಿವೇಶನದಾರರಿಗೆ ಸ್ವಾಧೀನ ನೀಡಿ ರಾಜೀವ್ ಗಾಂಧಿ ವಸತಿ ನಿಗಮ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ.ಡಿ. ಮಂಜುನಾಥ್, ಬಿ.ಎ. ರಮೇಶ್ ಹೆಗಡೆ, ಎಚ್.ಸಿ. ಯೋಗೇಶ್, ನಾಗರಾಜ ಕಂಕಾರಿ, ಶಾಮೀರ್ ಖಾನ್. ಆರ್.ಸಿ. ನಾಯ್ಕ, ಆರ್.ಎಸ್. ಸತ್ಯನಾರಾಯಣ ರಾಜು, ಯಮುನಾ ರಂಗೇಗೌಡ, ಮಂಜುಳಾ, ವಿಶ್ವನಾಥ್ ಕಾಶಿ, ಎಸ್.ವಿ. ರಾಜಮ್ಮ ಮತ್ತಿತರರು ಇದ್ದರು.