Advertisement

ನೀರಿನ ಸಮಸ್ಯೆ; ಪಾಲಿಕೆ ಸದ‌ಸ್ಯರ ಆಕ್ರೋಶ

11:56 AM Jun 30, 2019 | Naveen |

ಶಿವಮೊಗ್ಗ: ನಗರದಲ್ಲಿ ಉಲ್ಭಣವಾಗಿರುವ ನೀರಿನ ಸಮಸ್ಯೆ ಕುರಿತಂತೆ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಮೇಯರ್‌, ಉಪ ಮೇಯರ್‌ ಮೇಲೆ ಮುಗಿಬಿದ್ದರು.

Advertisement

ಶನಿವಾರ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರೊಬ್ಬರು, ಆಯುಕ್ತರು ಕಾರ್ಪೊರೇಟರ್‌ಗಳ ಕರೆಗಳನ್ನು ಸ್ವೀಕರಿಸುವುದಿಲ್ಲ. ವಾರ್ಡ್‌ಗಳಲ್ಲಿ ಜನ ನಮಗೆ ಛೀಮಾರಿ ಹಾಕುತ್ತಿದ್ದಾರೆ. ನಾವು ಸಮಸ್ಯೆ ಯಾರ ಬಳಿ ಹೇಳುವುದು. ಇದಕ್ಕೆ ನೀವು ಸ್ಪಷ್ಟನೆ ನೀಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ಗೆ ಪ್ರಶ್ನಿಸಿದರು. ಈ ನಡುವೆ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಎಚ್.ಸಿ. ಯೋಗೇಶ್‌, ‘ನಗರದಲ್ಲಿ ನೀರಿಗೆ ಹಾಹಾಕಾರವಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಇದೆ. ಇದು 3.5 ಲಕ್ಷ ಜನರ ಸಮಸ್ಯೆ, ಇದರ ಬಗ್ಗೆ ಮಾತನಾಡುವುದು ಬಿಟ್ಟು, ಫೋನ್‌ ರಿಸೀವ್‌ ಮಾಡದ ವಿಷಯ ಪ್ರಸ್ತಾಪಿಸುತ್ತಿರುವುದು ಸರಿಯಲ್ಲ ‘ ಎಂದು ವಾಗ್ಧಾಳಿ ನಡೆಸಿದರು.

ಬಿಜೆಪಿ ಸದಸ್ಯರೆಲ್ಲ ಏರುಧ್ವನಿಯಲ್ಲಿ ಮಾತನಾಡತೊಡಗಿದಾಗ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೇಳದಂತಾಯಿತು. ಸಭೆ ಗದ್ದಲದ ಗೂಡಾಯಿತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಧ್ವನಿಗೂಡಿಸಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮಳೆ ಕೈ ಕೊಟ್ಟಿದೆ. ಇದರ ಬಗ್ಗೆ ಪಾಲಿಕೆ ಯಾವ ರೀತಿ ಕ್ರಮ ಕೈಗೊಂಡಿದೆ. ಈ ಹಿಂದೆಯೇ ಸದಸ್ಯರ ಸಭೆ ನಡೆಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇದು ಆಡಳಿತ ವೈಫಲ್ಯ ಎಂದು ಟೀಕಿಸಿದರು. ಒಂದು ಹಂತದಲ್ಲಿ ಎಚ್.ಸಿ. ಯೋಗೀಶ್‌, ಫೋಟೋವೊಂದನ್ನು ಸಭೆಯಲ್ಲಿ ಪ್ರದರ್ಶಿಸಿ, ಈ ಫೋಟೋದಲ್ಲಿರುವ ನೀರು ಸಂಗ್ರಹ ಕೇಂದ್ರ ಕೆಟ್ಟು ಹೋಗಿದ್ದು, ಇದುವರೆಗೂ ಇದನ್ನು ಸರಿಪಡಿಸಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಯಾವುದೋ ಹಳೇ ಫೋಟೋ ತೋರಿಸಿ, ಸಭೆಯನ್ನು ತಪ್ಪು ದಾರಿಗೆ ಎಳೆಯಬೇಡಿ. ವಾಸ್ತವಾಂಶ ಅರಿತು ಮಾತನಾಡಿ ಎಂದರು. ಈ ಹಂತದಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದವು. ಅಲ್ಲದೆ. ಮಾತಿನ ಚಕಮಕಿ ಕೂಡಾ ನಡೆಯಿತು. ಉಪ ಮೇಯರ್‌ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟು ಹೋಗಿತ್ತು. ಅದನ್ನು ಹಂತ ಹಂತವಾಗಿ ಸರಿಪಡಿಸುತ್ತಿದ್ದೇವೆ. ನೀವು ಮಾಡಿದ ಘನ ಕಾರ್ಯ ಇದು ಎಂದು ಕಾಂಗ್ರೆಸ್‌- ಜೆಡಿಎಸ್‌ ಸದಸ್ಯರನ್ನು ಚುಚ್ಚಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಒಮ್ಮೆಲ್ಲೆ ಏರಿದ ಧ್ವನಿಯಲ್ಲಿ ಮಾತನಾಡುತ್ತಾ, ನೀವು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದೀರಿ. ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ನಿಮ್ಮ ತಪ್ಪನ್ನು ನಮ್ಮ ಮೇಲೆ ಹಾಕಬೇಡಿ ಎಂದು ವಾದಿಸಿದರು.

Advertisement

ಸಂಸದರ ಮಧ್ಯ ಪ್ರವೇಶ: ಸಭೆ ಗದ್ದಲದ ಗೂಡಾದಾಗ ಸಂಸದ ಬಿ.ವೈ. ರಾಘವೇಂದ್ರ ಮಧ್ಯ ಪ್ರವೇಶಿಸಿದರು. ಸಭೆ ಸ್ತಬ್ಧವಾಯಿತು. ಮಳೆಯ ಅಭಾವದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಪಾಲಿಕೆ ಈಗಾಗಲೇ ಎರಡು ದಿನಕ್ಕೆ ಒಂದು ಬಾರಿ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂಬುದರ ಬಗ್ಗೆ ಎಲ್ಲಾ ಸದಸ್ಯರು ಸಮನ್ವಯತೆಯಿಂದ ಚರ್ಚಿಸಿ, ಪರಿಹಾರ ಕಂಡುಕೊಳ್ಳಿ. ನೀವು ಈ ರೀತಿ ಗದ್ದಲ ಮಾಡಿಕೊಂಡರೆ ಅಧಿಕಾರಿಗಳು ಇದನ್ನೇ ಕಾಯುತ್ತಿರುತ್ತಾರೆ. ಅವರಿಗೆ ನಿಮ್ಮ ನಡುವೆ ಈ ರೀತಿಯ ಘಟನೆ ಆಗುವುದೇ ಬೇಕಾಗಿರುತ್ತದೆ. ಆದ್ದರಿಂದ ಅದಕ್ಕೆ ಆಸ್ಪದ ಕೊಡದೆ, ಒಟ್ಟಾಗಿ ಸಮಸ್ಯೆ ಪರಿಹಾರಕ್ಕೆ ಮಾರ್ಗ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.

ವಿಧಾನಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ಎಸ್‌. ರುದ್ರೇಗೌಡ, ಆರ್‌. ಪ್ರಸನ್ನಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next