Advertisement

ಗ್ರಾಮಸ್ವರಾಜ್ಯ ಕಲ್ಪನೆಗೆ ಸಾಕ್ಷಿಯಾಗಲಿದೆ ಚಿಟ್ಟೇಬೈಲು

12:02 PM Jul 12, 2019 | Naveen |

ಶರತ್‌ ಭದ್ರಾವತಿ
ಶಿವಮೊಗ್ಗ:
ಮಹಾತ್ಮಾ ಗಾಂಧೀಜಿಯವರ ಕನಸಿನ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಅನುಷ್ಠಾನಗೊಳ್ಳಲಿದೆ. ಕೇಂದ್ರ ಸರಕಾರದ ‘ಉನ್ನತ ಭಾರತ ಅಭಿಯಾನ’ಕ್ಕಾಗಿ ದೇಶದ ಐದು ಗ್ರಾಮಗಳು ಆಯ್ಕೆಯಾಗಿದ್ದು, ಅದರಲ್ಲಿ ತೀರ್ಥಹಳ್ಳಿ ತಾಲೂಕಿನ ಚಿಟ್ಟೆಬೈಲು ಗ್ರಾಮವೂ ಒಂದು. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವು ಈ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು ಅಭಿಯಾನದ ಉದ್ದೇಶ ಹಂತಹಂತವಾಗಿ ಈಡೇರಲಿವೆ.

Advertisement

ಮುಖ್ಯ ಉದ್ದೇಶ: ಮಹಾತ್ಮಾ ಗಾಂಧಿಧೀಜಿ ಅವರು ತಮ್ಮ ‘ಹಿಂದ್‌ ಸ್ವರಾಜ್‌’ ಕೃತಿಯಲ್ಲಿ ದೂರದೃಷ್ಟಿಯೊಂದಿಗೆ ಅಭಿವೃದ್ಧಿ ಮಾದರಿ ಹೇಗಿರಬೇಕು ಎಂಬುದನ್ನು ಉಲ್ಲೇಖೀಸಿದ್ದರು. ‘ನಗರೀಕಣ, ಕೇಂದ್ರೀಕೃತ ತಂತ್ರಜ್ಞಾನದ ಪ್ರಭಾವದಿಂದ ಪರಿಸರ ಹಾಳಾಗುತ್ತಿದೆ. ಅಸಮಾನತೆ ಹೆಚ್ಚಾಗುತ್ತಿದೆ. ಇದರಿಂದ ಹೊರಬರಲು ಸ್ವಾವಲಂಬಿ ಗ್ರಾಮ ಗಣರಾಜ್ಯವನ್ನು ಅಲ್ಲಿಯೇ ದೊರೆಯುವ ಸಂಪನ್ಮೂಲ ಬಳಸಿ ವಿಕೇಂದ್ರಿಕೃತ ವ್ಯವಸ್ಥೆಯಡಿ ಪರಿಸರ ಸ್ನೇಹಿ, ತಂತ್ರಜ್ಞಾನಗಳೊಂದಿಗೆ ಮೂಲ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ನೈರ್ಮಲ್ಯ, ಆರೋಗ್ಯ ರಕ್ಷಣೆ, ಇಂಧನ, ಜೀವನಮಟ್ಟ, ಸಾರಿಗೆ ಮತ್ತು ಶಿಕ್ಷಣ ದೊರೆಯುವಂತೆ ಮಾಡುವುದಾಗಿದೆ. ಇದು ಹಳ್ಳಿಗಳ ಪಾರಂಪರಿಕ ಅಭಿವೃದ್ಧಿ’ ಎಂದು ತಿಳಿಸಿದ್ದರು. ಇದನ್ನು ಆಧರಿಸಿ ಕೇಂದ್ರ ಸರಕಾರ ‘ಉನ್ನತ ಭಾರತ ಅಭಿಯಾನ’ ರೂಪಿಸಿದೆ.

ಸಂಸ್ಕೃತ ಸಂಸ್ಥಾನವು ಅಭಿಯಾನದಡಿ ಆಯ್ಕೆಯಾದ ಊರಿನ ಜನರಿಗೆ ಮೊದಲ ಹಂತದಲ್ಲಿ ಪ್ರಾಥಮಿಕ ಸಂಸ್ಕೃತ ಕಲಿಸಿಕೊಡಲಿದೆ. ಜತೆಗೆ ಸ್ವಚ್ಛತಾ ಪರಿಕಲ್ಪನೆ, ದೇಶಾಭಿಮಾನ, ಯೋಗ ಶಿಬಿರ, ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ, ನೀರು ಬಳಕೆ ವಿಧಾನ, ಸಾವಯವ ಕೃಷಿ, ನವೀಕೃತ ಇಂಧನಗಳ ಬಳಕೆ, ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುವುದು ಸಹ ಸೇರಿದೆ.

ಹೇಗಿದೆ ಚಿಟ್ಟೆಬೈಲು: ಚಿಟ್ಟೆಬೈಲು ಗ್ರಾಮ ತೀರ್ಥಹಳ್ಳಿ ಪಟ್ಟಣದಿಂದ ಮೂರು ಕಿಮೀ ದೂರದಲ್ಲಿದ್ದು, ಪಟ್ಟಣದ ಪ್ರಭಾವದಿಂದ ದೂರವಿದೆ. ಸುಮಾರು 60 ಕುಟುಂಬಗಳು ವಾಸಿಸುತ್ತಿದ್ದು, 300 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಶೃಂಗೇರಿಯ ಸಂಸ್ಕೃತ ಸಂಸ್ಥಾನದ ಅಂಗ ಸಂಸ್ಥೆಯಾದ ರಾಜೀವ್‌ ಗಾಂಧಿ ಕಾಲೇಜಿನ ಸಂಸ್ಕೃತ ಬಿ.ಇಡಿ ವಿಭಾಗವು ಯೋಜನೆ ಅನುಷ್ಠಾನ ಜವಾಬ್ದಾರಿ ತೆಗೆದುಕೊಂಡಿದೆ. ಇನ್ನು ಚಿಟ್ಟೆಬೈಲು ಗ್ರಾಮದಲ್ಲಿ ಇರುವ ಪ್ರಜ್ಞಾ ಭಾರತಿ ಶಾಲೆ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ. ಆಗಸ್ಟ್‌ 16ರಿಂದ ಬಿ.ಇಡಿ ವಿದ್ಯಾರ್ಥಿಗಳು ಗ್ರಾಮದಲ್ಲಿ ಬೀಡುಬಿಟ್ಟು ಸಂಸ್ಕೃತ ಕಲಿಕೆ, ತರಬೇತಿ, ಜಾಗೃತಿ ಕಾರ್ಯಕ್ರಮ ಆರಂಭಿಸಲಿದ್ದಾರೆ.

ಪ್ರಜ್ಞಾ ಭಾರತಿ ಶಾಲೆ ಸಹಾಯದಿಂದ ಚಿಟ್ಟೆಬೈಲು ಗ್ರಾಮದಲ್ಲಿ ಈ ಹಿಂದೆಯೇ ಅನೇಕ ಸಂಸ್ಕೃತ ತರಬೇತಿ ಶಿಬಿರ ಆಯೋಜಿಸಲಾಗಿದೆ. ಹಾಗಾಗಿ ಇದೇ ಗ್ರಾಮವನ್ನು ಆಯ್ಕೆ ಮಾಡಬಹುದು ಎಂದು ವರದಿ ಕಳುಹಿಸಲಾಗಿತ್ತು. ಸರಕಾರ ಈಗ ಅನುಮತಿ ನೀಡಿದೆ. ಸಂಸ್ಕೃತ ಕಲಿಕೆ ಒಂದು ಭಾಗವಾಗಿರಲಿದೆ. ಜತೆಗೆ ಗಾಂಧೀಜಿ ಅವರ ಗ್ರಾಮಸ್ವರಾಜ್ಯ ಕಲ್ಪನೆಯು ಇಲ್ಲಿ ಸಾಕಾರಗೊಳ್ಳಲಿದೆ. ಶಾಲೆಯ 50 ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಮುಂದಿನ ತಿಂಗಳಿಂದ ತರಬೇತಿಗೆ ತೆರಳಿದ್ದಾರೆ.
ಡಾ|ಚಂದ್ರಕಾಂತ್‌,
ಸಹಾಯಕ ಪ್ರಾಧ್ಯಾಪಕ, ಬಿ.ಇಡಿ ವಿಭಾಗ, ರಾಜೀವ್‌ ಗಾಂಧಿ ಪರಿಸರ, ಶೃಂಗೇರಿ

Advertisement

ಈ ಅಭಿಯಾನಕ್ಕೆ ನಮ್ಮ ಶಾಲೆ ಹಾಗೂ ಎಲ್ಲ ಸಂಸ್ಥೆಗಳು ಸಹಕಾರ ನೀಡಲಿದೆ. ಹಿಂದಿನ ವರ್ಷಗಳಲ್ಲಿ ಗ್ರಾಮದಲ್ಲಿ ಸಂಸ್ಕೃತ ಶಿಬಿರ, ಯೋಗ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಕಾರ್ಯಕ್ರಮಗಳಿಗೂ ಉತ್ತಮ ಸ್ಪಂದನೆ ಸಿಕ್ಕಿದೆ. ಅದಕ್ಕಾಗಿಯೇ ಈ ಯೋಜನೆಗೆ ಈ ಗ್ರಾಮವು ಪ್ರಶಸ್ತವಾಗಿದೆ.
ನಾಗರಾಜ್‌ ಅಡಿಗ,
ಪ್ರಾಚಾರ್ಯ, ಪ್ರಜ್ಞಾ ಭಾರತಿ ಶಾಲೆ, ಚಿಟ್ಟೆಬೈಲು.

Advertisement

Udayavani is now on Telegram. Click here to join our channel and stay updated with the latest news.

Next