ಶಿವಮೊಗ್ಗ : ನಗರ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಹೇರಿದ್ದ ಕರ್ಫ್ಯೂ ನಾಳೆ (ಫೆ.26) ಬೆಳಿಗ್ಗೆ ಆರು ಗಂಟೆಗೆ ಅಂತ್ಯಗೊಳ್ಳಲ್ಲಿದ್ದು ಆದರೆ ಶನಿವಾರ ಬೆಳಗ್ಗೆ ಆರು ಗಂಟೆಯಿಂದ ಫೆಬ್ರವರಿ 28 ರ ಬೆಳಗ್ಗೆ 9 ಗಂಟೆವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇದಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿಕೆ ನೀಡಿದ್ದಾರೆ.
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿತ್ತು ಆದರೆ ಸದ್ಯದ ಪರಿಸ್ಥಿತಿ ಶಾಂತವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಕರ್ಫ್ಯೂ ತೆರವುಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ.
ಜನ ಗುಂಪಾಗಿ ಸೇರುವುದು, ಕಾರ್ಯಕ್ರಮ, ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆಯೂ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಪರಿಸ್ಥಿತಿ ಅವಲೋಕಿಸಿ ಸೋಮವಾರದ ಬಳಿಕ ಶಾಲಾ ಕಾಲೇಜು ಆರಂಭಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ನಾಳೆ ಬೆಳಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಶಿವಮೊಗ್ಗ ನಗರದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : ಶಾಲೆಯಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯ ಬರ್ಬರ ಹತ್ಯೆ : ಕಾರಣ ನಿಗೂಢ