ಶಿವಮೊಗ್ಗ: ಲೇಖಕರು ರಾಜಕಾರಣದಿಂದ ದೂರ ಇರಬೇಕು ಎಂದು ಎಸ್.ಎಲ್. ಭೈರಪ್ಪ ಅವರಂತಹ ಸಾಹಿತಿಗಳು ಹೇಳುತ್ತಾರೆ. ಅತ್ತ ಅವರೇ ಸಮಕಾಲೀನ ರಾಜಕಾರಣ ಬಿಂಬಿಸುವ ಕೆಲಸ ಮಾಡುತ್ತಾರೆ. ಈಚೆಗೆ ದೇಶದ ಪ್ರಧಾನಿಯನ್ನು ಪ್ರಶ್ನಿಸುವುದೇ ಅಪರಾಧ ಎನ್ನುವಂತಹ ವರ್ಗವೊಂದು ಹುಟ್ಟಿಕೊಂಡಿದೆ. ಕೆಲವರು ಪಾರ್ಲಿಮೆಂಟ್, ವಿಧಾನಸೌಧಗಳನ್ನು ವಂಶದ ಜಹಗೀರು ಮಾಡಿಕೊಂಡಿದ್ದಾರೆ. ಇಂತಹ ಅಧಿಕಾರ ಕೇಂದ್ರಗಳನ್ನು ಗುತ್ತಿಗೆ ಪಡೆದವರಂತೆ ನಡೆದುಕೊಳ್ಳುತ್ತಾರೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪುಸ್ತಕ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಾಮಾಜಿಕ, ಧಾರ್ಮಿಕ, ರಾಜಕೀಯ ವ್ಯವಸ್ಥೆಯ ಲೋಪಗಳನ್ನು ದಿಟ್ಟತನದಿಂದ ಪ್ರಶ್ನಿಸುವ ಸಾಹಿತ್ಯ ದೀರ್ಘಾಯುಷಿ. ಸಾಹಿತ್ಯಕ್ಕೆ ಎಲ್ಲವನ್ನೂ ಪ್ರಶ್ನಿಸುವ ಗುಣ ಇರಬೇಕು. ಬಡತನವನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ಮುಗ್ಧತೆ ಮತ್ತು ಪ್ರಶ್ನಿಸುವ ಮನೋಭಾವ ಸಾಹಿತ್ಯದ ಸ್ಥಾಯಿ ಭಾವಗಳು. ಈ ಸತ್ಯವನ್ನು ಅರ್ಥ ಮಾಡಿಕೊಳ್ಳದ ಸಾಹಿತಿ ಶೋಕೇಸ್‌ನಲ್ಲಿರುವ ಬೊಂಬೆಗೆ ಸಮ. ಅವರು ಬರೆಯುವ ಸಾಹಿತ್ಯ ಅಲ್ಪಾಯುಷಿ ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿಗಳಿಗೆ ನೇಮಕವಾಗುವ ಸಾಹಿತಿಗಳು ಪ್ರಶ್ನಿಸುವ ಮನೋಸ್ಥಿತಿ ಕಳೆದುಕೊಳ್ಳುತ್ತಾರೆ. ಇಂತಹ ಪರಂಪರೆ ಆರಂಭವಾದುದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಅವಧಿಯಲ್ಲಿ. ಈಗಲೂ ಅಂಥ ಪರಂಪರೆ ಮುಂದುವರಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಪತಪ ಮಾಡಿದರೆ ಮಳೆ ಬರುವುದಿಲ್ಲ. ಜಲಾಶಯಗಳು ತುಂಬುವುದಿಲ್ಲ. ಜನರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರಕುವುದಿಲ್ಲ. ಈಗಿನ ರಾಜಕಾರಣಿಗಳು ಸಾರ್ವಜನಿಕರ ಹಣ ಹೇಗೆ ಕಬಳಿಸುತ್ತಿದ್ದಾರೆ ಎಂದರೆ ಜೆಸಿಬಿಯಂತಹ ಯಂತ್ರಗಳೇ ನಾಚಿಕೊಳ್ಳುತ್ತಿವೆ. ಯುಜಿಸಿ ವೇತನ ಪಡೆಯುವ ಅಧ್ಯಾಪಕರೂ ತೆರಿಗೆ ವಂಚಿಸಲು ಲೆಕ್ಕ ಹಾಕುತ್ತಾರೆ ಎಂದು ಕುಹಕವಾಡಿದರು.
ಜಿ.ಎಸ್. ಭಟ್ಟ ಅವರ ‘ಅಕ್ಕಮ್ಮಜ್ಜಿಯ ಗಂಡನೂ ವಾಣಸಜ್ಜನ ಹೆಂಡ್ತಿಯೂ’ ಕಾದಂಬರಿಗೆ ಕುವೆಂಪು ಬಹುಮಾನ, ಪಾರ್ವತಿ ಜಿ. ಐತಾಳ್ ಅವರ ‘ಮಲೆಯಾಳದ ಮಹಿಳಾ ಕಥನ’ ಅನುವಾದ ಕೃತಿಗೆ ಪ್ರೊ| ಎಸ್.ವಿ.ಪರಮೇಶ್ವರ ಭಟ್ಟ, ಡಾ| ವಿನಯಾ ಅವರ ‘ಉಡಿಯಕ್ಕಿ’ ಕೃತಿಗೆ ಎಂ.ಕೆ. ಇಂದಿರಾ, ಪ್ರೊ| ಅಬ್ದುಲ್ ಬಷೀರ್ ಅವರ ‘ಧರ್ಮ ಸಮನ್ವಯ ಸಾಹಿತ್ಯ ವಿಮರ್ಶೆ’ ಕೃತಿಗೆ ಪಿ. ಲಂಕೇಶ್, ನಂದಿನಿ ವಿಶ್ವನಾಥ್ ಹೆದ್ದುರ್ಗ ಅವರ ‘ಒಳಸೆಲೆ’ ಕವನ ಸಂಕಲನಕ್ಕೆ ಡಾ| ಜಿ.ಎಸ್. ಶಿವರುದ್ರಪ್ಪ, ನರೇಂದ್ರ ರೈ ದೇರ್ಲ ಅವರ ‘ನೆಲಮುಖ’ ಅಂಕಣ ಬರಹಕ್ಕೆ ಡಾ| ಹಾ.ಮಾ. ನಾಯಕ, ಎಸ್. ಗಂಗಾಧರಯ್ಯ ಅವರ ‘ದೇವರ ಕುದುರೆ’ ಸಣ್ಣ ಕಥಾ ಸಂಕಲನಕ್ಕೆ ಡಾ| ಯು.ಆರ್. ಅನಂತಮೂರ್ತಿ, ದು. ಸರಸ್ವತಿ ಅವರ ‘ಸಣ್ತಿಮ್ಮಿ ಪುರಾಣ’ ನಾಟಕಕ್ಕೆ ಡಾ| ಕೆ.ವಿ. ಸುಬ್ಬಣ್ಣ, ಪ್ರಸಾದ್ ನಾಯ್ಕ ಅವರ ‘ಹಾಯ್ ಅಂಗೋಲಾ’ ಪ್ರವಾಸ ಸಾಹಿತ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ, ಡಾ| ಪಾಲಹಳ್ಳಿ ವಿಶ್ವನಾಥ್ ಅವರ ‘ವಿಶ್ವದ ವೈವಿಧ್ಯ’ ವಿಜ್ಞಾನ ಸಾಹಿತ್ಯ ಕೃತಿಗೆ ಹಸೂಡಿ ವೆಂಕಟಶಾಸ್ತ್ರಿ, ನಿರ್ಮಲಾ ಸುರತ್ಕಲ್ ಅವರ ‘ಹೇಳು ನೋಡೋಣ’ ಮಕ್ಕಳ ಸಾಹಿತ್ಯ ಕೃತಿಗೆ ಡಾ| ನಾ.ಡಿಸೋಜ ಬಹುಮಾನ ಹಾಗೂ ಡಾ| ಪತಂಜಲಿ ಅವರ ‘ಅಜೀರ್ಣ’ ವೈದ್ಯ ಸಾಹಿತ್ಯ ಕೃತಿಗೆ ಡಾ| ಎಚ್.ಡಿ. ಚಂದ್ರಪ್ಪ ಗೌಡ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಸಂಘದ ಕಾರ್ಯದರ್ಶಿ ಎಚ್.ಎಸ್. ನಾಗಭೂಷಣ ಮಾತನಾಡಿದರು. ಉದಯಶಂಕರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.