ಶಿವಮೊಗ್ಗ : ಬಿಎಸ್ ಯಡಿಯೂರಪ್ಪ, ಬಂಗಾರಪ್ಪ, ಈಶ್ವರಪ್ಪ ಅವರಂತಹ ಘಟಾನುಘಟಿ ರಾಜಕಾರಣಿಗಳು ಪ್ರತಿನಿಧಿಸಿದ್ದ ಶಿವಮೊಗ್ಗ ದಲ್ಲಿ ಏಳು ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಮತ್ತು ಒಂದು ಜೆಡಿಎಸ್ ಗೆಲುವು ಸಾಧಿಸಿದೆ.
ಶಿವಮೊಗ್ಗ ಗ್ರಾಮೀಣ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಶಾರದ ನಾಯ್ಕ(85768) ಜಯ ಸಾಧಿಸಿದ್ದಾರೆ. ಬಿಜೆಪಿಯ ಕೆ.ಬಿ ಅಶೋಕನಾಯ್ಕ 70610 ಮತಗಳನ್ನು ಪಡೆದಿದ್ದಾರೆ.
ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ್ 65329 ಮತಗಳನ್ನು ಪಡೆದು ಜಯ ಗಳಿಸಿದ್ದು, ಜೆಡಿಎಸ್ ನ ಶಾರದ ಅಪ್ಪಾಜಿ 62743 ಮತಗಳನ್ನು ಪಡೆದಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರು 95399 ಮತಗಳನ್ನು ಪಡೆದು ಕಾಂಗ್ರೆಸ್ ನ ಹೆಚ್ ಸಿ ಯೋಗೇಶ್ (68071) ಅವರನ್ನು ಸೋಲಿಸಿದ್ದಾರೆ. ಬಿಜೆಪಿಗೆ ಸೆಡ್ಡು ಹೊಡೆದು ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಆಯನೂರು ಮಂಜುನಾಥ್ ಹೀನಾಯ ಸೋಲು ಅನುಭವಿಸಿದ್ದಾರೆ.
Related Articles
ಹಲವು ಸಚಿವರು ಸೋಲು ಅನುಭವಿಸಿದರೂ ತೀರ್ಥಹಳ್ಳಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ (83879) ಅವರು ಕಿಮ್ಮನೆ ರತ್ನಾಕರ್ (71791) ಎದುರು ಜಯಭೇರಿ ಬಾರಿಸಿದ್ದಾರೆ.
ಶಿಕಾರಿಪುರದಲ್ಲಿ ಬಿ ವೈ ವಿಜಯೇಂದ್ರ (81015) ಅವರು ಜಿದ್ದಾಜಿದ್ದಿನ ಸ್ಪರ್ಧೆಯನ್ನು ಸ್ವತಂತ್ರ ಅಭ್ಯರ್ಥಿಯಿಂದ ಎದುರಿಸಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಬಂಡಾಯ ಸ್ವತಂತ್ರ ಅಭ್ಯರ್ಥಿ ಎಸ್.ಪಿ ನಾಗರಾಜ ಗೌಡ 70371 ಮತಗಳನ್ನು ಪಡೆದು ಪ್ರಬಲ ಸ್ಪರ್ಧೆ ನೀಡಿ ಯಡಿಯೂರಪ್ಪ ಅವರ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ತೋರಿದರು. ಯಡಿಯೂರಪ್ಪ ಅವರ ಕುತಂತ್ರದಿಂದ ನನಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು ಎಂದು ಆಕ್ರೋಶವನ್ನೂ ಹೊರ ಹಾಕಿ ಕಣಕ್ಕಿಳಿದಿದ್ದರು.
ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲ ಕೃಷ್ಣ (88179) ಅವರು ಬಿಜೆಪಿಯ ಹರತಾಳು ಹಾಲಪ್ಪ(72263) ಎದುರು ಭರ್ಜರಿ ಜಯ ಸಾಧಿಸಿದ್ದಾರೆ.
ಸೊರಬದಲ್ಲಿ ಸಹೋದರರ ಸವಾಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ( 98232) ಅವರು ಬಿಜೆಪಿ ಅಭ್ಯರ್ಥಿ ಎಸ್.ಕುಮಾರ್ ಬಂಗಾರಪ್ಪ (54311) ಅವರಿಗೆ ಸೋಲು ಉಣಿಸಿದ್ದಾರೆ.