ಶಿವಮೊಗ್ಗ: ಈ ಹಿಂದೆ ಅಕ್ಷರ, ಬರವಣಿಗೆ ಹುಟ್ಟುವ ಮೊದಲೇ ಕಲೆ, ಸಾಹಿತ್ಯ ಇತ್ತು. ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ ಎಂದು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ಭಾವ ಸಂಗಮ ಸಮಾಗಮದ 4ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಯುವ ಬರಹಗಾರರಲ್ಲಿ ಪ್ರತಿಭೆ, ಸತತ ಪ್ರಯತ್ನದ ಗುಣಗಳು ಮೈಗೂಡಬೇಕಿದೆ. ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ದೊಡ್ಡ ಸಾಹಿತಿಗಳು ಪುಸ್ತಕಗಳು, ದೊಡ್ಡ ದೊಡ್ಡ ಗ್ರಂಥಗಳು, ಮ್ಯಾಗ್‌ಜಿನ್‌ಗಳನ್ನು ಓದುವದರ ಜತೆಗೆ ತಾವು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಬರೆಯುವ ಪ್ರೌಢಿಮೆ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಅಕ್ಷರರೂಪ ಮಾತ್ರವಲ್ಲದೇ ಮೌಖೀಕ ಹಾಗೂ ಜನಪದವೂ ಉತ್ತಮ ಉತ್ತಮ ಸಾಹಿತ್ಯವಾಗಿದೆ. ಈ ಹಿಂದೆ ಮನುಷ್ಯ ತನ್ನ ಭಾವನೆಗಳನ್ನು ಕಲ್ಲಿನಲ್ಲಿ ಕೆತ್ತಿ ವ್ಯಕ್ತಪಡಿಸುತ್ತಿದ್ದ. ಜನಪದರು ತಮ್ಮ ದಿನನಿತ್ಯದ ಜೀವನದ ಸಂಗತಿಗಳನ್ನೇ ಹಾಡುವ ಮೂಲಕ ಅಭಿವ್ಯಕ್ತಿಸುತ್ತಿದ್ದರು. ಜನಪದ ತ್ರಿಪದಿಗಳು ಇಂದಿಗೂ ನಮ್ಮನ್ನು ಸೆಳೆಯುತ್ತವೆ ಎಂದು ಹೇಳಿದರು.
ಕನ್ನಡ ಕಥಾಗುಚ್ಚದ ನಿರ್ವಾಹಕಿ ಸುಮಾ ಕಳಸಾಪುರ ಮಾತನಾಡಿ, ‘ಸಾಹಿತ್ಯ, ಬರವಣಿಗೆ ಅಭಿರುಚಿ ಬೆಳೆಸುವುದಕ್ಕಾಗಿ ರಚಿಸಿದ ಕನ್ನಡ ಕಥಾಗುಚ್ಚ ಪೇಸ್‌ಬುಕ್ ಗ್ರೂಫ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ರಾಜ್ಯ, ದೇಶ ಮಾತ್ರವಲ್ಲದೇ ಹೊರದೇಶದಲ್ಲಿರುವವರೂ ಇದರಲ್ಲಿ ಸೇರ್ಪಡೆಗೊಂಡಿದ್ದಾರೆ. ಸಾವಿರಾರು ಮಂದಿ ಬರೆಯುತ್ತಿದ್ದಾರೆ. ಆರಂಭದಲ್ಲಿ ಓದುಗರಾಗಿದ್ದವರು ಇದೀಗ ಬರಹಗಾರರಾಗಿ ಬದಲಾಗಿದ್ದಾರೆ. ಇಲ್ಲಿ ಬರಹ ಆರಂಭಿಸಿದ ಅನೇಕರ ಲೇಖನಗಳು ಇದೀಗ ದಿನ, ವಾರ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ’ ಎಂದು ಹೇಳಿದರು.
ಭಾವ ಸಂಗಮದ ಸಂಚಾಲಕ ರಾಜೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಅಧಿಕಾರಿ ಡಾ|ನೂರ್ ಸಮದ್ ಅಬ್ಬಲಗೆರೆ ಇದ್ದರು. ಈ ಸಂದರ್ಭದಲ್ಲಿ ಸಾಧಕರನ್ನು ಗೌರವಿಸಲಾಯಿತು.