ಶಿವಮೊಗ್ಗ: ಪೋಷಕರ ಒತ್ತಡದ ಜೀವನದಿಂದಾಗಿ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಕಡೆಗೆ ಗಮನ ಹರಿಸಲು ಸಾಧ್ಯವಾಗದಿರುವ ಅನೇಕ ಕಾರಣಗಳಿಂದಾಗಿ ಅಪ್ರಾಪ್ತ ಮಕ್ಕಳಲ್ಲಿ ಅನೇಕ ರೀತಿಯ ಕಾಯಿಲೆಗಳು ಗೋಚರಿಸುತ್ತಿವೆ. ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಆರೋಗ್ಯದ ಕಡೆಗೆ ಕಾಳಜಿ ವಹಿಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಹೇಳಿದರು.
ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಜಂತುಹುಳು ನಿವಾರಣಾ ದಿನದ ಕುರಿತು ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ. 10ರಂದು ಜಿಲ್ಲೆಯಲ್ಲಿ 1-19 ವರ್ಷ ವಯೋಮಿತಿಯೊಳಗಿನ 4.46ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪೋಷಕರು ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಸೂಚಿಸಿದರು.
ಜಂತುಹುಳು ಸೋಂಕಿನಿಂದಾಗಿ ಮಕ್ಕಳು ರಕ್ತಹೀನತೆ, ಪೌಷ್ಠಿಕಾಂಶ ಕೊರತೆ, ಹಸಿವೆಯಾಗದಿರುವುದು, ನಿಶಕ್ತಿ ಮತ್ತು ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವಂತಹ ಹಲವು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಆದ್ದರಿಂದ ಮಕ್ಕಳ ಆರೋಗ್ಯದ ಕುರಿತು ಜಾಗೃತಿ ಅಗತ್ಯ ಎಂದರು.
ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಅಲಬೆಂಡೋಝೋಲ್ ಜಂತುಹುಳು ಮಾತ್ರೆಗಳನ್ನು ವಿತರಿಸಲು ಉದ್ದೇಶಿಸಲಾಗಿದ್ದು, ಸಂಬಂಧಿ ತ ಇಲಾಖೆಗಳ ಅಧಿಕಾರಿಗಳು ಮಾತ್ರೆಗಳ ವ್ಯವಸ್ಥಿತ ವಿತರಣೆಗೆ ಹಾಗೂ ಯಾವೊಬ್ಬ ಮಗುವೂ ಈ ಯೋಜನೆಯಿಂದ ಹೊರಗುಳಿಯದಂತೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಶಾಲೆಗೆ ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆಗಳನ್ನು ವಿತರಿಸಲಾಗುವುದು. ಈ ಮಾತ್ರೆಯು ಮಕ್ಕಳಿಗೆ ಸುರಕ್ಷಿತವಾಗಿದ್ದು, ಶಾಲೆಯಲ್ಲಿಯೇ ಸೇವಿಸಲು ನೀಡಲಾಗುವುದು ಎಂದರು.
ಜಂತು ಹುಳು ನಿವಾರಣೆಯಾಗುವುದರಿಂದ ರಕ್ತಹೀನತೆಯನ್ನು ನಿಯಂತ್ರಿಸಬಹುದಾಗಿದೆ ಅಲ್ಲದೆ ಪೋಷಕಾಂಶ ಹೀರಿಕೆಯನ್ನು ಸುಧಾರಿಸಬಹುದಾಗಿದೆ. ಅಲ್ಲದೆ ಪರೋಕ್ಷವಾಗಿ ಏಕಾಗ್ರತೆ, ಕಲಿಕಾ ಸಾಮರ್ಥ್ಯ ಹಾಗೂ ಶಾಲೆ-ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿ ಸುಧಾರಣೆಯಾಗಲಿದೆ. ಕೆಲಸದ ಸಾಮರ್ಥ್ಯ ಹಾಗೂ ಜೀವನೋಪಾಯದ ಅವಕಾಶಗಳನ್ನು ವೃದ್ಧಿಸಲು ನೆರವಾಗಲಿದೆ. ಪರಿಸರದಲ್ಲಿ ಜಂತುಹುಳುಗಳನ್ನು ಕಡಿಮೆ ಮಾಡುವುದರ ಮೂಲಕ ಸಮುದಾಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಗರದ ಸಂಚಾರಿ ವೈದ್ಯಕೀಯ ಘಟಕದ ಕಾರ್ಯ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂ ದಿಗಳ ಕಾರ್ಯಕ್ಷಮತೆ ಹಾಗೂ ಕಾರ್ಯವೈಖರಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾಗರದ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಪುಷ್ಪಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಪಾಂಚಾಳ, ಆರ್.ಸಿ.ಎಚ್.ಅಧಿಕಾರಿ ಡಾ| ನಾಗರಾಜ್ ನಾಯ್ಕ ಮತ್ತಿತರರು ಇದ್ದರು.