ಶಿವಮೊಗ್ಗ: ನಗರದ ತ್ಯಾವರೆಕೊಪ್ಪ ಹುಲಿಸಿಂಹ ಧಾಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರ ಮಂಗಳವಾರ ಮಹತ್ವದ ಸಭೆ ನಡೆಸಿದರು.
ಸಭೆ ಬಳಿಕ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲಯನ್ ಸಫಾರಿಯಲ್ಲಿ 650 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಜೋಗ್‌ಫಾಲ್ಸ್‌ನಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ವರ್ಷ ಪೂರ್ತಿ ಜೋಗ ಜಲಪಾತ ನೋಡಲು ಪ್ರವಾಸಿಗರು ಬರುವಂತೆ ವ್ಯವಸ್ಥೆ ಮಾಡಲಾಗುವುದು. ಪ್ರತಿದಿನ 20 ಸಾವಿರ ಪ್ರವಾಸಿಗರನ್ನು ಸೆಳೆಯುವ ಉದ್ದೇಶವಿದೆ. ಮಳೆಗಾಲದಲ್ಲಿ ಮಾತ್ರ ಜೋಗಜಲಪಾತದ ವೈಭವ ಕಣ್ ತುಂಬಿಕೊಳ್ಳಬಹುದಾಗಿದ್ದು, ಇದನ್ನು ವಾರಾಂತ್ಯದಲ್ಲಿ ಅಥವಾ ವರ್ಷವಿಡೀ ನೋಡುವಂತಾಗಲು ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಬನ್ನೇರುಘಟ್ಟ, ಮೈಸೂರು ಮೃಗಾಲಯ, ಹಂಪಿ ಮೃಗಾಲಯಕ್ಕಿಂತ ಹೆಚ್ಚಿನ ಅನುಕೂಲತೆ ತ್ಯಾವರೆಕೊಪ್ಪ ಹುಲಿಸಿಂಹ ಧಾಮಕ್ಕಿದೆ. ಭಾರತೀಯ ಮೃಗಾಲಯ ಪ್ರಾಧಿಕಾರದಿಂದ 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದರೊಂದಿಗೆ ಖಾಸಗಿಯವರ ಸಹಕಾರದಿಂದಲೂ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಂಗಾ ನದಿಯಿಂದ ಲಯನ್ ಸಫಾರಿಗೆ ನೀರು ಒದಗಿಸಲು ನೆರವು ನೀಡಿದ್ದಾರೆ. ಬೇಸಿಗೆಯಲ್ಲಿಯೂ ಇಲ್ಲಿಗೆ ತುಂಗಾ ನದಿಯಿಂದ ನೀರು ಪೂರೈಕೆಯಾಗಲಿದೆ. ಹೊಸದಾಗಿ ಅನೇಕ ಪ್ರಾಣಿಗಳು, ಅಪರೂಪದ ಪಕ್ಷಿಗಳನ್ನು ತರುವ ಯೋಜನೆಯಿದೆ ಎಂದು ತಿಳಿಸಿದರು.
ಸಕ್ರೆಬೈಲು, ಆನೆಬಿಡಾರದಲ್ಲಿ 20 ಕೋಟಿ. ರೂ. ವೆಚ್ಚದ ಅಭಿವೃದ್ಧಿ ಕಾರ್ಯ ಕೈಗೊಳ್ಳ ಲಾಗಿದೆ. ಶಿಕಾರಿಪುರದಲ್ಲಿ ಅಕ್ಕಮಹಾದೇವಿ ಜನ್ಮಸ್ಥಳವನ್ನು ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.