ಸಾಗರ: ಕಾಗೋಡು ಸತ್ಯಾಗ್ರಹ ಕುರಿತು ಇನ್ನಷ್ಟು ವಿಸ್ತೃತ ಅಧ್ಯಯನದ ಅಗತ್ಯವಿದೆ. ಇಂತಹ ಸತ್ಯಾಗ್ರಹವನ್ನು ದೀರ್ಘವಾಗಿ ಅಧ್ಯಯನ ನಡೆಸಿ, ಸತ್ಯಾಗ್ರಹಕ್ಕೆ ಮೂಲ ಕಾರಣ, ಈಡೇರಿದ ಆಶಯ ಕುರಿತು ವಿಶ್ಲೇಷಣೆ ನಡೆಸಬೇಕಿದೆ ಎಂದು ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಪ್ರತಿಪಾದಿಸಿದರು.
ಇಲ್ಲಿನ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾಗೋಡು ಚಳುವಳಿಯ 70ರ ನೆನಪು ಹಾಗೂ ಡಾ| ಎಚ್.ಗಣಪತಿಯಪ್ಪ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಎಲ್ಲ ರೈತ ಚಳುವಳಿಗಿಂತ ಅತ್ಯಂತ ದೊಡ್ಡ ರೈತ ಚಳುವಳಿಯಾಗಿ ಇತಿಹಾಸದ ಪುಟದಲ್ಲಿ ಗುರುತಿಸಿಕೊಂಡಿರುವುದು ಕಾಗೋಡು ರೈತ ಚಳುವಳಿ ಎನ್ನುವುದು ದಾಖಲಾರ್ಹ. ಉಳುವವನದ್ದೇ ಭೂಮಿ ಎಂಬ ತತ್ವ ಅನುಷ್ಠಾನಕ್ಕೆ ಕಾರಣವಾಗಿರುವ ಸತ್ಯಾಗ್ರಹವನ್ನು ಯುವಪೀಳಿಗೆಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಕಾಗೋಡು ರೈತ ಚಳುವಳಿ ಜನಮಾನಸದಿಂದ ದೂರವಾಗಲು ಬಿಟ್ಟರೆ ನಾವು ಚಳುವಳಿಗೆ ದ್ರೋಹ ಬಗೆದಂತೆ ಆಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೋರಾಟ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಪ್ರಭುತ್ವ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಯೋಜಿತವಾಗಿ ನಡೆಯುತ್ತಿದೆ. ನಾವು ಏನು ಮಾತನಾಡಿದರೂ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವದ ದುರಂತ. ವಿಶ್ವದ ಯಾವ ರಾಷ್ಟ್ರಗಳಲ್ಲೂ ಕಾಣದ ಕಠಿಣ ಸಂದರ್ಭ ಭಾರತದಲ್ಲಿ ನಿರ್ಮಾಣವಾಗಿದೆ. ಇಂತಹ ಹೊತ್ತಿನಲ್ಲಿ ನಾವು ಕಾಗೋಡು ರೈತ ಚಳುವಳಿಯ 70ರ ನೆನಪು ಕಾರ್ಯಕ್ರಮ ನಡೆಸುತ್ತಿದ್ದೇವೆ. ಭವಿಷ್ಯದ ಹೋರಾಟಕ್ಕೆ ಈ ಹೋರಾಟದ ಕಿಚ್ಚು ಮಾರ್ಗಸೂಚಿಯಾಗಬೇಕು ಎಂದು ತಿಳಿಸಿದರು. ಡಾ| ಎಚ್.ಗಣಪತಿಯಪ್ಪ ನೇಗಿಲಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಕಾಗೋಡು ಸತ್ಯಾಗ್ರಹಿ ದೊಡ್ಡೇರಿ ಈರಪ್ಪ ಮಂಡಗಳಲೆ, ಕಾಗೋಡು ಸತ್ಯಾಗ್ರಹ ಸಾವಿರಾರು ಕುಟುಂಬವನ್ನು ಜಮೀನುದಾರಿಕೆ ದಾಸ್ಯದಿಂದ ಮುಕ್ತಿಗೊಳಿಸಿದೆ. ಆ ಹೋರಾಟದ ಕಾಲ ಅತ್ಯಂತ ಕಠಿಣವಾಗಿತ್ತು. ಹೋರಾಟದ ಯಶಸ್ಸು ಕಂಡು ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನಮಗೆಲ್ಲ ಭೂಮಿಹಕ್ಕು ನೀಡಿದಾಗ ನಮ್ಮ ಹೋರಾಟದ ಬದುಕು ಸಾರ್ಥಕವಾಗಿತ್ತು ಎಂದು ಹೇಳಿದರು.
ಶಿವಮೊಗ್ಗ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಮೋಹನ್ ಚಂದ್ರಗುತ್ತಿ ಈ ಹೊತ್ತಿನ ಹೋರಾಟದ ಆತಂಕಗಳ ಕುರಿತು ಮಾತನಾಡಿದರು. ಶೃಂಗೇರಿ ಶಂಕರಮಠದ ಅಶ್ವಿನಿಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ರಾಜೇಂದ್ರ ಆವಿನಹಳ್ಳಿ, ರೈತ ಮುಖಂಡರಾದ ದಿನೇಶ್ ಶಿರವಾಳ, ಅಮೃತರಾಜ್ ತ್ಯಾಗರ್ತಿ ಇದ್ದರು. ಅಂಬಿಕಾ ಪ್ರಾರ್ಥಿಸಿದರು. ದೇವರಾಜ್ ವಿ.ಜಿ. ಸ್ವಾಗತಿಸಿದರು. ಹೊಯ್ಸಳ ಗಣಪತಿಯಪ್ಪ ವಂದಿಸಿದರು. ಲೋಕೇಶಕುಮಾರ್ ನಿರೂಪಿಸಿದರು.