ಸಾಗರ: ಸಂಗೀತಕ್ಕೆ ಎಲ್ಲ ಕಷ್ಟ, ನೋವುಗಳನ್ನು ಮರೆಸುವ ಶಕ್ತಿ ಇದೆ ಎಂದು ಸಂಗೀತ ಶಿಕ್ಷಕಿ ವಿದುಷಿ ಅಮೃತ ಎಸ್.ಭಟ್ಟ ಹೇಳಿದರು.
ಇಲ್ಲಿನ ಗಾಂಧಿ ನಗರದ ಗೌತಮ್ ಸಭಾಂಗಣದಲ್ಲಿ ವಿಪ್ರ ವೈದಿಕ ಪರಿಷತ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಗೀತಕ್ಕೆ ಯಾರೂ ಊಹಿಸಲಾರದ ಮಾಂತ್ರಿಕ ಶಕ್ತಿ ಇದೆ. ಪರಸ್ಪರ ಪ್ರೀತಿಸುವುದನ್ನು, ಸೌಹಾರ್ದತೆ ಕಲಿಸುತ್ತದೆ. ರೋಗ ಗುಣಪಡಿಸುವ ಶಕ್ತಿಯೂ ಸಂಗೀತಕ್ಕಿದೆ ಎಂಬ ಉಲ್ಲೇಖವಿದೆ ಎಂದರು.
ನನ್ನ ಗುರುಗಳಾದ ಶಿವಮೊಗ್ಗದ ಗುರುಗುಹಾ ವಿದ್ವಾನ್ ಶೃಂಗೇರಿ ನಾಗರಾಜ್ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಸಂಗೀತ ಕ್ಷೇತ್ರದಲ್ಲಿ ಪರಿಶ್ರಮದಿಂದ ಒಂದು ಹಂತ ತಲುಪಿದ್ದೇನೆ. ಸಂಗೀತ ಕ್ಷೇತ್ರ ವಿಶಾಲವಾಗಿದ್ದು, ಇಲ್ಲಿ ಕಲಿಯುವುದು ಬಹಳ ಇದೆ. ಕಲಿಯುವ ಆಸಕ್ತಿ ಇದ್ದವರಿಗೆ ನಿರಂತರ ಅಭ್ಯಾಸ ಬೇಕಾಗುತ್ತದೆ. ಸಾಧನೆ ಮಾಡುವ ಹಂಬಲವಿದ್ದವರು ಮಾತ್ರ ಎತ್ತರಕ್ಕೆ ಬೆಳೆಯುತ್ತಾರೆ ಎಂದರು.
ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರಧಾನ ವಕ್ತಾರ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಸಂಗೀತಾಭ್ಯಾಸ ನಮ್ಮ ವ್ಯಕ್ತಿತ್ವಕ್ಕೊಂದು ಹೊಸ ಮೆರುಗನ್ನು ನೀಡುತ್ತದೆ. ಸಂಗೀತದ ಆಸ್ವಾದನೆಯಿಂದ ನಮ್ಮ ಮನಸ್ಸು, ಬುದ್ಧಿಗೆ ನವ ಚೈತನ್ಯ ದೊರಕುತ್ತದೆ. ಸಂಗೀತ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಇದು ಕೆಲವರನ್ನು ಮಾತ್ರ ಕೈ ಹಿಡಿಯುತ್ತದೆ. ಸಂಗೀತ, ಕಲಾ ಪ್ರಕಾರಗಳು ನಮ್ಮ ಸಂಬಂಧ ಗಟ್ಟಿಗೊಳಿಸುತ್ತವೆ. ಅಮೃತ ಅವರಿಗೆ ಅವರ ತಂದೆಯವರು ಕಡು ಬಡತನದಲ್ಲೂ ಕಷ್ಟಪಟ್ಟು ಸಂಗೀತ ಕಲಿಸಿದ್ದಾರೆ. ಇವರು ಸಂಗೀತಾಭ್ಯಾಸ ಮಾಡಿ ಈಗ 15 ವರ್ಷದಿಂದ ಸಂಗೀತಾಸಕ್ತ ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದಾರೆ. ಇವರ ಸಾಧನೆ ಶ್ಲಾಘನೀಯವಾದುದು ಎಂದರು.
ಇಂದಿರಮ್ಮ, ಮಣಿಕಲ್ ಗಣೇಶ್ ಭಟ್ಟ, ವಿನಯ್ ಜೋಯ್ಸ, ತಮ್ಮಣ್ಣ ಭಟ್ಟ, ಸತ್ಯನಾರಾಯಣ ಭಟ್ಟ, ದತ್ತಾತ್ತಿ ಭಟ್ಟ, ಉಮೇಶ್ ಭಟ್ಟ, ನಾಗೇಂದ್ರ ಭಟ್ಟ, ಶೇಷಾಚಲ ಭಟ್ಟ ಮತ್ತಿತರರು ಹಾಜರಿದ್ದರು. ವಿಪ್ರ ವೈದಿಕ ಪರಿಷತ್ ಗೌರವಾಧ್ಯಕ್ಷ ಗೋಪಾಲ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ನಂಜುಂಡಸ್ವಾಮಿ ಪ್ರಾರ್ಥಸಿದರು. ನವೀನ್ ಜೋಯ್ಸ ಸ್ವಾಗತಿಸಿದರು. ಮಂಜುನಾಥ ಭಟ್ ವಂದಿಸಿದರು. ದರ್ಶನ್ ಭಟ್ಟ ನಿರೂಪಿಸಿದರು.
ಓದಿ :
ಚಿಕಿತ್ಸೆಯಿಂದ ಕ್ಷಯ ರೋಗ ನಿರ್ಮೂಲನೆ ಸಾಧ್ಯ: ಸಿಇಒ