Advertisement

ಆಸ್ತಿ ತೆರಿಗೆ ಹೆಚ್ಚಳ; ಸಭೆಯಲ್ಲಿ ಗದ್ದಲವೋ ಗದ್ದಲ

11:00 PM Jul 15, 2021 | Shreeraj Acharya |

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆ ವಿಷಯ ಪ್ರತಿಧ್ವನಿಸಿತು. ಬುಧವಾರ ನಡೆದ ಸಭೆಯ ಆರಂಭದಿಂದ ಇದೇ ವಿಷಯಕ್ಕೆ ಗದ್ದಲ, ಪ್ರತಿಭಟನೆ, ವಾಗ್ವಾದಗಳು ನಡೆದು ಕೊನೆಗೆ ತೆರಿಗೆ ವಿಷಯ ಪುನರ್‌ ಪರಿಶೀಲಿಸಲು ಸರ್ಕಾರಕ್ಕೆ ಪತ್ರ ಬರೆಯಲು ತಿರ್ಮಾನ ಕೈಗೊಳ್ಳಲಾಯಿತು.

Advertisement

ಸಭೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಪಕ್ಷದ ಸದಸ್ಯ ಎಚ್‌.ಸಿ. ಯೋಗೀಶ್‌, ಬಿ.ಎ. ರಮೇಶ್‌ ಹೆಗ್ಡೆ, ಯಮುನಾ ರಂಗೇಗೌಡ, ಆರ್‌.ಸಿ. ನಾಯ್ಕ ಮತ್ತು ಜೆಡಿಎಸ್‌ ಸದಸ್ಯ ನಾಗರಾಜ್‌ ಕಂಕಾರಿ ಅವರು ಆಯುಕ್ತರು ಮತ್ತು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು. ಎಸ್‌.ಆರ್‌. ದರದಲ್ಲಿ ತೆರಿಗೆ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಈಗಿರುವುದಕ್ಕಿಂತ ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಅಲ್ಲದೇ ಖಾಲಿ ಜಾಗಕ್ಕೂ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ.

ಹೂವು ಗಿಡಗಳನ್ನು ಬೆಳೆಸಿಕೊಳ್ಳಲು, ದನಕರುಗಳನ್ನು ಸಾಕಿಕೊಳ್ಳಲು ಹುಲ್ಲಿನ ಬಣವೆ ಹಾಕಲು ಬಿಟ್ಟಿದ್ದ ಜಾಗಗಳಿಗೆಲ್ಲ ತೆರಿಗೆ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ. ಇದು ಸರಿಯಲ್ಲ, ಈ ಕೂಡಲೇ ಇದನ್ನು ಪುನರ್‌ ಪರಿಶೀಲಿಸಬೇಕೆಂದು ಆಗ್ರಹಿಸಿದರು. ಇದೇ ವಿಷಯಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ಗದ್ದಲಗಳು ನಡೆದವು. ಅವೈಜ್ಞಾನಿಕ ತೆರಿಗೆ ಏರಿಕೆ ವಿರೋ ಧಿಸಿ ಕಾಂಗ್ರೆಸ್‌ ಸದಸ್ಯರು ಬಾವಿಗಿಳಿದು ಪ್ಲೇ ಕಾರ್ಡ್‌ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಎಸ್‌.ಎನ್‌. ಚನ್ನಬಸಪ್ಪ, ಸುರೇಖಾ ಮುರಳೀಧರ್‌, ವಿಶ್ವನಾಥ್‌, ಅನಿತಾ ರವಿಶಂಕರ್‌,  ಧೀರರಾಜ್‌ ಹೊನ್ನವಿಲೆ ಮತ್ತು ಮೇಯರ್‌ ಸುನಿತಾ ಅಣ್ಣಪ್ಪ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಲು ಮುಂದಾದಾಗ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡರಲ್ಲದೇ ಇದು ಸರಿ ಹೊಂದದೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಇದೇ ಸರಿ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು. ಹಾಗೆಯೇ, ಆಯುಕ್ತರು ಪ್ರತಿಕ್ರಿಯಿಸಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಸರ್ಕಾರ ಆಸ್ತಿ ತೆರಿಗೆ ಕಾಯ್ದೆಗೆ ಸಂಬಂಧಿ ಸಿದಂತೆ ನೀಡಿದ ಮಾರ್ಗಸೂಚಿ ಪ್ರಕಾರ ತೆರಿಗೆ ವಿ ಧಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಈ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಇದು ಬಡವರ ವಿರೋಧಿಯಾಗಿದೆಮತ್ತು ಅವೈಜ್ಞಾನಿಕ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಗದ್ದಲ ಹೆಚ್ಚಾಗಿ ಸಭೆಯಲ್ಲಿ ಯಾರೇನು ಹೇಳುತ್ತಿದ್ದಾರೆ ಎಂಬುದೇ ತಿಳಿಯದ ಸ್ಥಿತಿ ಉಂಟಾಗಿತ್ತು. ಇದರಿಂದ ಸಭೆ ಗೊಂದಲದ ಗೂಡಾಯಿತು. ಕೂಗಾಟ- ಅರಚಾಟದ ಮಧ್ಯೆ ಪ್ರಧಾನಿ ಮೋದಿ ವಿರುದ್ಧವೂ ವಿರೋಧ ಪಕ್ಷದವರು ಘೋಷಣೆ ಕೂಗಿದರು. ಮೋದಿ ಎಂದರೆ ಸಾವು ಎಂಬ ವಿರೋಧ ಪಕ್ಷದವರ ಘೋಷಣೆ ಆಡಳಿತ ಪಕ್ಷದವರನ್ನು ಕೆರಳಿಸಿತು. ಮೋದಿ ಎಂದರೆ ವಿಶ್ವನಾಯಕ ಎಂದು ಆಡಳಿತ ಪಕ್ಷದವರೂ ಕೂಡ ಘೋಷಣೆ ಕೂಗಿದರು. ಮೋದಿ ಎಂಬ ಒಂದು ಘೋಷಣೆಗೆ ಎರಡೂ ಪಕ್ಷದವರ ಪರ, ವಿರೋಧಗಳು ಪ್ರತಿಧ್ವನಿಸಿ ಸಭೆಯ ದಿಕ್ಕನ್ನೇ ಬದಲಾಯಿಸಿತು. ಕೊನೆಗೆ ಆಸ್ತಿ ತೆರಿಗೆಗೆ ಸಂಬಂ ಧಿಸಿದಂತೆ ಪುನರ್‌ ಪರಿಶೀಲನೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಆಯುಕ್ತರು ಹೇಳುವುದರೊಂದಿಗೆ ಈ ವಿಷಯಕ್ಕೆ ಪೂರ್ಣವಿರಾಮ ಬಿದ್ದಿತು.

Advertisement

22 ರಂದು ಸ್ಮಾರ್ಟ್‌ ಸಿಟಿ ವಿಶೇಷ ಸಭೆ: ಸ್ಮಾರ್ಟ್‌ ಸಿಟಿ ಕಾಮಗಾರಿ ವಿಳಂಬ, ಕಳಪೆ, ಅವೈಜ್ಞಾನಿಕ ಕಾಮಗಾರಿ ಮುಂತಾದ ವಿಷಯಗಳಿಗೆ ಸಂಬಂ ಧಿಸಿದಂತೆ ಸಭೆಯಲ್ಲಿ ಪಕ್ಷಬೇಧ ಮರೆತು ಸದಸ್ಯರು ಒಕ್ಕೊರಲಿನಿಂದ ಪ್ರಸ್ತಾಪಿಸಿದರು. ಎಲ್ಲೆಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಡೆಯುತ್ತಿವೆಯೋ ಅವು ವಿಳಂಬವಾಗುತ್ತಿವೆ. ವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿಲ್ಲ. ಪಾಲಿಕೆ ಆಯುಕ್ತರೇ ಸ್ಮಾರ್ಟ್‌ ಸಿಟಿ ಕಾಮಗಾರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೂ ಇದುವರೆಗೆ ಒಂದು ಸಭೆಯನ್ನು ಕರೆಯದೇ ಪಾಲಿಕೆ ಸದಸ್ಯರನ್ನು ಇದರಿಂದ ದೂರವಿಟ್ಟಿದ್ದಾರೆ ಎಂದು ದೂರಿದರಲ್ಲದೇ, ಇದಕ್ಕಾಗಿ ವಿಶೇಷ ಸಭೆ ಕರೆಯಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಸುನಿತಾ ಅಣ್ಣಪ್ಪ ಜು. 22 ರಂದು ಸಂಜೆ 4 ಗಂಟೆಗೆ ವಿಶೇಷ ಸಭೆ ನಿಗದಿಪಡಿಸಿರುವುದಾಗಿ ಘೋಷಿಸಿದರು. ಈ ಚರ್ಚೆಯಲ್ಲಿ ಸದಸ್ಯರಾದ ರಮೇಶ್‌ ಹೆಗ್ಡೆ, ನಾಗರಾಜ್‌ ಕಂಕಾರಿ, ಯೋಗೀಶ್‌, ಆರ್‌.ಸಿ. ನಾಯ್ಕ ಅವರಲ್ಲದೇ ಆಡಳಿತ ಪಕ್ಷದವರೂ ಕೂಡ ಭಾಗವಹಿಸಿದ್ದರು. ಸಭೆಯಲ್ಲಿ  ಧೀರರಾಜ್‌ ಹೊನ್ನವಿಲೆ, ಎಲ್‌ಇಡಿ ಬಲ್ಬ್ ಮತ್ತು ಭೂಗತ ಕೇಬಲ್‌ಗ‌ಳ ಬಗ್ಗೆ ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂದು ತಿಳಿಸಿದರೆ, ಅನಿತಾ ರವಿಶಂಕರ್‌ ತಮ್ಮ ವಾರ್ಡಿನ ಸಮಸ್ಯೆಯನ್ನು ತಿಳಿಸಿದರು. ಪರಿಶೀಲಿಸುವುದಾಗಿ ಮೇಯರ್‌ ಉತ್ತರಿಸಿದರು. ಸಭೆಯಲ್ಲಿ ಉಪ ಮೇಯರ್‌ ಶಂಕರ್‌ ಗನ್ನಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next