ಶಿವಮೊಗ್ಗ: ಸರ್ಕಾರದಿಂದ ಸೌಲಭ್ಯ ಪಡೆಯುವ ಉದ್ದೇಶದಿಂದ ಜು.25 ರಂದು ಗಂಗಾವತಿಯ ಹೇಮಗುಡ್ಡದಲ್ಲಿ ಆರ್ಯ ಈಡಿಗ ಸಮಾಜದ ಚಿಂತನ -ಮಂಥನ ಸಭೆ ಏರ್ಪಡಿಸಲಾಗಿದೆ ಎಂದು ರಾಣೆಬೆನ್ನೂರು ಶರಣ ಬಸವೇಶ್ವರ ಮಠದ ಡಾ|ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯ ಈಡಿಗ ಸಮುದಾಯ ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಕೂಡ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಸಂಘಟನೆ ಬಲವಾಗಿಲ್ಲದಿರುವುದರಿಂದ ರಾಜಕೀಯ ಅಧಿ ಕಾರವೂ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ ಹೀಗಾಗಿ ಸಂಘಟನೆ ಬಲಪಡಿಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ ಎಂದರು.
ಮಸ್ಕಿ ಉಪ ಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪನವರು ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅದರ ರೂಪುರೇಷೆ ಸಿದ್ಧವಾಗಿಲ್ಲ. ಈ ಬಗ್ಗೆಯೂ ಸಮಾಜದ ಪ್ರಮುಖರ ಸಭೆಯಲ್ಲಿ ಚರ್ಚಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಮುಖಂಡರು ಆಗಮಿಸಲಿದ್ದಾರೆ. ಸುಮಾರು 700 ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದರ ಪೂರ್ವಭಾವಿಯಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಆರ್ಯ ಈಡಿಗ ಸಮುದಾಯದ 7 ಜನ ಶಾಸಕರಿದ್ದು, ಅದರಲ್ಲಿ 5 ಜನ ಹಿರಿಯ ಶಾಸಕರಿದ್ದಾರೆ. ಒಬ್ಬರಿಗೆ ಸಚಿವ ಸ್ಥಾನ ನೀಡಿರುವುದು ಬಿಟ್ಟರೆ ಉಳಿದವರಿಗೆ ಯಾವುದೇ ಅ ಧಿಕಾರವಿಲ್ಲ. ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನವಾದರೂ ಲಭ್ಯವಾಗಬೇಕಿತ್ತು. ಅದನ್ನು ನೀಡಿಲ್ಲ ಎಂದರು. ರಾಜ್ಯದಲ್ಲಿ ಅಧಿ ಕಾರ ನಡೆಸಿದ ಎಲ್ಲಾ ಪಕ್ಷಗಳೂ ಈಡಿಗ ಸಮುದಾಯವನ್ನು ಆರ್ಥಿಕವಾಗಿ ತುಳಿಯುವ ಕೆಲಸ ನಿರಂತರವಾಗಿ ಮಾಡಿವೆ. ಸಾರಾಯಿ ನಿಷೇಧದಿಂದಾಗಿ ಸಾಕಷ್ಟು ಕುಟುಂಗಳು ಬೀದಿಗೆ ಬಂದಿವೆ. ಅಂತಹ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಯಾವುದೇ ಸರ್ಕಾರಗಳು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೇಮಗುಡ್ಡದಲ್ಲಿ ಚಿಂತನ ಮಂಥನ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಆ ಬಳಿಕವೂ ಕ್ರಮಕೈಗೊಳ್ಳದಿದ್ದರೆ ಶಿವಮೊಗ್ಗದಲ್ಲಿಯೇ ದೊಡ್ಡ ಸಮಾವೇಶ ನಡೆಸಲಾಗುವುದು ಎಂದರು. ಇಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಎಸ್.ಸಿ. ರಾಮಚಂದ್ರ, ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಮುಖಂಡರಾದ ವೀಣಾ, ಜಿ.ಡಿ.ಮಂಜುನಾಥ, ಕೆ.ವೈ. ರಾಮಚಂದ್ರಪ್ಪ, ಸುಧಾಕರ್, ಕೆ. ಉಮೇಶ್ ಮತ್ತಿತರರು ಇದ್ದರು.