ರಿಪ್ಪನ್‌ಪೇಟೆ: ಕವಲೇದುರ್ಗ ಲಿಂಗೈಕ್ಯ ಡಾ| ಸಿದ್ಧಲಿಂಗ ಶಿವಾಚಾರ್ಯರು ಮರೆಯದ ಮಾಣಿಕ್ಯ ಎಂದು ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಣ್ಣಿಸಿದರು.
ಸಮೀಪದ ಕವಲೇದುರ್ಗ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ಲಿಂಗೈಕ್ಯ ಡಾ|ಸಿದ್ಧಲಿಂಗ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗುರು-ವಿರಕ್ತರನ್ನು ಒಗ್ಗೂಡಿಸುವಲ್ಲಿ ಲಿಂಗೈಕ್ಯ ಸ್ವಾಮಿಗಳ ಕಾರ್ಯ ಮೆಚ್ಚುವಂತಹದ್ದು. ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸುವ ಮೂಲಕ ವೀರಶೈವ ಪರಂಪರೆಯನ್ನು ಅನಾದಿ ಕಾಲದಿಂದಲೂ ಉತ್ತುಂಗಕ್ಕೆ ಬೆಳಗಿಸಿದ ಕವಲೆದುರ್ಗ ಪಟ್ಟಾಧ್ಯಕ್ಷ ಡಾ|ಸಿದ್ಧಲಿಂಗ ಶಿವಾಚಾರ್ಯರು ಎಲ್ಲ ಶ್ರೀಗಳಿಗೂ ಮಾದರಿಯಾಗಿದ್ದಾರೆ.
ಅವರು ನಮ್ಮ ಜತೆ ಇಲ್ಲದಿದ್ದರೂ, ಅವರು ಮಾಡಿದ ಮಹಾತ್ಕಾಯಗಳು ನಮ್ಮನ್ನು ಸದಾ ಎಚ್ಚರಿಸುವಂತಿವೆ ಎಂದರು. ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಆನಂದಪುರಂ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ|ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು, ಕೆಳದಿ ಅರಸರ ಕಾಲದಲ್ಲಿನ ಈ ಮಠ ಸಂಪೂರ್ಣ ವಿನಾಶದಂಚಿಗೆ ಹೋಗುವುದರೊಂದಿಗೆ, ತನ್ನ ಗತವೈಭವದಿಂದ ಭಕ್ತರ ಮನಸ್ಸಿನಿಂದ ದೂರವಾಗಿತ್ತು. ನಂತರ ಸಿದ್ಧಲಿಂಗ ಶ್ರೀಗಳ ಶ್ರಮದಿಂದಾಗಿ ತನ್ನ ಮೂಲ ಸ್ವರೂಪ ಪಡೆಯುವುದರೊಂದಿಗೆ ಕೆಳದಿ ಅರಸರ ಅಳ್ವಿಕೆಯ ಕುರಿತು ಅಧ್ಯಯನ ನಡೆಸುವ ಮೂಲಕ ಹಲವು ಗ್ರಂಥಗಳನ್ನು ಮತ್ತು ವಿಚಾರ ಸಂಕಿರಣ ಮಂಥನ ಶಿಬಿರಗಳನ್ನು ಏರ್ಪಡಿಸುವುದರೊಂದಿಗೆ ಇಂದಿನ ಯುವಪೀಳಿಗೆಯಲ್ಲಿ ರಾಜಮಹಾರಾಜರ ಕಾಲದ ಅರಿವಿನ ಜಾಗೃತಿ ಮೂಡಿಸಿ ಇತಿಹಾಸವನ್ನು ಮರುಕಳಿಸುವ ಕಾರ್ಯದಲ್ಲಿ ಶ್ರೀಗಳ ಕಾರ್ಯ ಪ್ರಶಂಸನೀಯವಾಗಿದೆ. ವೀರಶೈವ ಧರ್ಮದ ಪವಿತ್ರ ಗ್ರಂಥ ಸಿದ್ಧಾಂತ ಶಿಖಾಮಣಿ ಪ್ರವಚನದೊಂದಿಗೆ ಧರ್ಮ ಪ್ರಚಾರ ಮಾಡಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದರು.
ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇತಿಹಾಸ ಪ್ರಸಿದ್ಧ ಕವಲೆದುರ್ಗ ಸಂಸ್ಥಾನ ಮಠಕ್ಕೆ ಸರ್ಕಾರದಿಂದ ಹೆಚ್ಚಿನ ಅರ್ಥಿಕ ನೆರವು ಕಲ್ಪಿಸುವ ಭರವಸೆ ನೀಡಿದರು. ಈಗಾಗಲೇ ಸುಮಾರು ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಮಠದ ಜೀರ್ಣೋದ್ಧಾರ ಕಾರ್ಯ ಶೀಘ್ರದಲ್ಲಿ ಆರಂಭಿಸುವಂತೆ ಹೇಳಿದರು.
ಮಳಲಿಮಠ, ಬಿಳಕಿ, ತೊಗರ್ಸಿ, ಕೊಟ್ಟೂರು, ಶಿವಗಂಗೆ, ವಿಭೂತಿಪುರಮಠ ಜಡೆ, ಮೂಲೆಗದ್ದೆ, ಅರಮನೆ ಜಪದಕಟ್ಟಮಠ, ಅವರಗೊಳ್ಳ, ಹೊಟ್ಟಾಪುರ ಹೀರೆಮಠ, ದಿಂಡದಹಳ್ಳಿ, ಹಾರನಹಳ್ಳಿ, ಕೊಡ್ಲಿಗಿ, ಹುಣಸಘಟ್ಟ ಇನ್ನಿತರ ಮಠಗಳ ಶಿವಾಚಾರ್ಯರು ಭಾಗವಹಿಸಿದ್ದರು. ಉದ್ಯಮಿ ಕೋಣಂದೂರು ಕೆ.ಆರ್.ಪ್ರಕಾಶ್, ತ್ಯಾರಂದೂರು ಮುರುಗೇಂದ್ರ, ಕಟ್ಟೆಗದ್ದೆ ಹಾಲಪ್ಪ, ಪಾಂಡಣ್ಣ, ಶಂಕರಯ್ಯಶಾಸ್ತ್ರಿ ಹಾದಿಗಲ್ಲು, ಜಗದೀಶಯ್ಯ ತ್ಯಾರಂದೂರು, ಆರಗ ಶಾಂತಯ್ಯ, ಆರ್.ಎಸ್.ಪ್ರಶಾಂತ ಇನ್ನಿತತರು ಹಾಜರಿದ್ದರು.