ಶಿಕಾರಿಪುರ: ಕೇಂದ್ರ, ರಾಜ್ಯ ಸರಕಾರ ಕಾರ್ಮಿಕರ ಹಿತಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟ ಅರಿತು ಅವರ ಬ್ಯಾಂಕ್ ಖಾತೆಗೆ 3000 ರೂ. ನೇರವಾಗಿ ಜಮೆ ಮಾಡಲಾಗಿದೆ.
ಪ್ರತಿಯೊಬ್ಬರಿಗೂ ಆಹಾರ ಕಿಟ್ ವಿತರಿಸಲಾಗುತ್ತಿದೆ. ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲು ಆದ್ಯತೆ ನೀಡಲಾಗಿದೆ ಎಂದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಕೂಲಿ ಕಾರ್ಮಿಕರು ದಿನನಿತ್ಯ ಕೂಲಿ ಮಾಡಿ ಊಟ ಮಾಡುವ ಸ್ಥಿತಿಯಲ್ಲಿದ್ದಾರೆ.
ಅವರ ಜೀವನ ನಿರ್ವಹಣೆ ಲಾಕ್‌ಡೌನ್ ಅವಧಿಯಲ್ಲಿ ಕಷ್ಟಕರವಾಗಿತ್ತು. ಅದನ್ನು ಅರಿತು ಸರಕಾರ ಸಹಾಯಹಸ್ತ ಚಾಚಿದ್ದು ಅದರ ಸದ್ಭಳಕೆ ಮಾಡಿಕೊಳ್ಳಬೇಕು. ತಾಲೂಕಿನ ಒಟ್ಟು 15000 ಕಾರ್ಮಿಕರಿಗೆ ಕಿಟ್ ವಿತರಿಸಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷೆ ಲಕ್ಷ ಮಹಾಲಿಂಗಪ್ಪ, ಕಾರ್ಮಿಕ ಕಲ್ಯಾಣ ಅಧಿಕಾರಿ ವಿಶ್ವನಾಥ್, ಮುಖಂಡರಾದ ಟಿ.ಎಸ್. ಮೋಹನ್, ಗುರುರಾಜ್ ಜಗತಾಪ್, ಬೆಣ್ಣೆ ದೇವೇಂದ್ರಪ್ಪ, ಎಂ.ಬಿ. ಚನ್ನವೀರಪ್ಪ, ರೂಪಕಲಾ ಹೆಗಡೆ, ರಮೇಶ್ ಗುಂಡ, ರೇಖಾಬಾಯಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಗಿಡ್ಡಪ್ಪ, ಪೇಂಟರ್ ಸಂಘದ ಅಧ್ಯಕ್ಷ ಗಿಡ್ಡಪ್ಪ ಮತ್ತಿತರರು ಇದ್ದರು.